Advertisement

ಪಂಚಗ್ರಹಗಳ “ಸರಳ ರೇಖಾ’ಚಿತ್ತಾರ; ಐದು ಗ್ರಹಗಳ ಸಮ್ಮೇಳನ: ಬಾಹ್ಯಾಕಾಶದಿಂದ ನೇರಪ್ರಸಾರ!

01:28 PM Jun 06, 2022 | Team Udayavani |

ನವದೆಹಲಿ: ಸುಮಾರು 18 ವರ್ಷಗಳ ನಂತರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಂತರಿಕ್ಷದಲ್ಲಿ ತಮ್ಮ ಪರಿಭ್ರಮಣೆಯ ನಡುವೆ ಒಂದೇ ಸರಳ ರೇಖೆಯಲ್ಲಿ ಬಂದು ನಿಲ್ಲಲಿವೆ. ಇದು ಖಗೋಳಾಸಕ್ತರಿಗೆ ವೀಕ್ಷಣೆಯ ರಸದೌತಣ ನೀಡಲಿದೆ ಎಂದು “ಸ್ಕೈ ಆ್ಯಂಡ್‌ ಟೆಲಿಸ್ಕೋಪ್ಸ್‌ ಅಬ್ಸರ್ವಿಂಗ್‌’ ನಿಯತಕಾಲಿಕೆ ತಿಳಿಸಿದೆ.

Advertisement

ಅಂತರಿಕ್ಷದಲ್ಲಿ ಸೂರ್ಯನ ಸುತ್ತಲೂ ಪರಿಭ್ರಮಿಸುತ್ತಿರುವ ಎರಡು ಅಥವಾ ಮೂರು ಗ್ರಹಗಳು ಆಗಾಗ ಹೀಗೆ ಸರಳರೇಖೆಯಲ್ಲಿ ಬಂದು ನಿಲ್ಲುತ್ತವೆ. ಆದರೆ, ಐದು ಗ್ರಹಗಳು ಸಮಾನಾಂತರವಾಗಿ ಕಾಣಿಸಿಕೊಳ್ಳುವುದು ಅಪರೂಪ. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳ ಬಗ್ಗೆ ಹೇಳುವುದಾದರೆ, 2004ರಲ್ಲಿ ಈ ಐದು ಗ್ರಹಗಳು ಸರಳ ರೇಖೆಯಲ್ಲಿ ಕಾಣಿಸಿಕೊಂಡಿದ್ದವು. ಮತ್ತೊಂದೆ ಹೀಗೆ ಇವು ಸಮಾನಾಂತರವಾಗಿ ನಿಲ್ಲುವುದನ್ನು ನೋಡಬೇಕೆಂದರೆ 2040ರವರೆಗೂ ಕಾಯಬೇಕು.

ಯಾವಾಗ, ಎಲ್ಲಿ ಕಾಣಬಹುದು?
ಜೂನ್‌ ತಿಂಗಳು ಪೂರ್ತಿ ಈ ವಿದ್ಯಮಾನ ಗೋಚರಿಸುತ್ತದೆ. ಮೋಡ-ಮಳೆ, ಮತ್ಯಾವುದೇ ಪ್ರತಿಕೂಲ ಹವಾಮಾನವಿಲ್ಲದ ನಿಚ್ಚಳ ಆಕಾಶದಲ್ಲಿ ಬೆಳಗಿನ ಜಾವ ಇವು ಸ್ಪಷ್ಟವಾಗಿ ಕಾಣಿಸುತ್ತವೆ. ಸರಳರೇಖೆಯಲ್ಲಿರುವ ಗ್ರಹಗಳಲ್ಲಿ ಬುಧ ಗ್ರಹ ಕೆಲ ದಿನಗಳವರೆಗೆ ಬರಿಗಣ್ಣಿಗೆ ಕಾಣಿಸದಿರಬಹುದು, ಆದರೆ ಬೈನಾಕ್ಯುಲರ್‌ನಲ್ಲಿ ಇದು ಕಾಣಸಿಗುತ್ತದೆ. ದಿನಗಳೆದಂತೆ, ಬುಧ ಗ್ರಹ, ದೊಡ್ಡದಾಗಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಹೇಳಲಾಗಿದೆ.

ಜೂ. 27ರಂದು ಹೊಸ ಅತಿಥಿ ಸೇರ್ಪಡೆ!
ಐದು ಗ್ರಹಗಳ ಸಮ್ಮೇಳನಕ್ಕೆ ಜೂ. 27ರಂದು ಹೊಸ ಅತಿಥಿಯೊಬ್ಬರು ಸೇರ್ಪಡೆಯಾಗಲಿದ್ದಾರೆ. ಅದು ನಮ್ಮ ಭೂಮಿಯ ಚಂದ್ರ! ಹೌದು. ಸಾಲಾಗಿ ನಿಂತಿರುವಂತೆ ಕಾಣುವ ಈ ಐದು ಗ್ರಹಗಳಲ್ಲಿ ಮಂಗಳ ಹಾಗೂ ಬುಧ ಗ್ರಹಗಳ ನಡುವೆ ನಮ್ಮ ಚಂದ್ರ ಕೂಡ ಅರ್ಧ ಚಂದ್ರಾಕೃತಿಯಲ್ಲಿ ಸೇರ್ಪಡೆಯಾಗಲಿದ್ದಾನೆ.

ಖಗೋಳಾಸಕ್ತಿಯುಳ್ಳವರಿಗೆ ಇದೊಂದು ಹಬ್ಬದ ಸಮಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next