ಶಿರಸಿ: ರೈತರ ಪಹಣಿಯಲ್ಲಿ ಬೆಳೆಗಾರರೇ ಬೆಳೆ ನೋಂದಣಿ ಮಾಡಲು ಅನುಕೂಲವಾಗುವಂತೆ ಸಿದ್ಧ ಪಡಿಸಲಾದ ಬೆಳೆ ಸರ್ವೇ ಆ್ಯಪ್‌ನ್ನು ವಾರದೊಳಗೆ ರಾಜ್ಯದ ಸುಮಾರು 70 ಸಾವಿರಕ್ಕೂ ಅಧಿಕ ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದಾರೆ.
ಆದರೆ, ದೇಶದಲ್ಲೇ ಪ್ರಥಮ ಬಾರಿಗೆ ರೈತರ ಕೈಗೆ ಪಹಣಿ ದಾಖಲೆಗೆ ಸರಕಾರ ಅವಕಾಶ ನೀಡಿದೆ. ಆದರೆ, ಬಳಕೆ ಹೊತ್ತಿನಲ್ಲಿ ಒಂದಿಷ್ಟು ಕಿರಿಕಿರಿ,ಗೊಂದಲಗಳ ಜೊತೆಗೇ ತ್ರಾಸು ಇದೆ. ಆದರೆ, ಸ್ಮಾರ್ಟ್ ಮೊಬೈಲ್‌ನಲ್ಲಿ ಬೆಳೆ ದಾಖಲಿಸಲು ಬೆಳೆಗಾರಮುಂದಾದರೆ ಆರಂಭದಲ್ಲೇ ಹಲವು ವಿಘ್ನ ಉಂಟಾಗುತ್ತಿವೆ. ರೈತರಿಗೆ ಇಡೀ ತೋಟ ಓಡಾಟ ಮಾಡುವಂತಾಗಿದೆ.
ಮರಳಿ ಯತ್ನ ಮಾಡು!: ಬೆಳೆ ಸರ್ವೇ ಆ್ಯಪ್ ಡೌನ್‌ಲೋಡ್ ಆದ ಬಳಿಕ ಹೆಸರು, ಮೊಬೈಲ್ ನಂಬರ್ ದಾಖಲಿಸಿದ ಬಳಿಕ ಒಟಿಪಿ ಬರುತ್ತದೆ. ಅಲ್ಲಿ ತನಕ ಇಂಟರ್‌ನೆಟ್ ನೆಟ್‌ವರ್ಕ್ ಇದ್ದರೂ ನಾಲ್ಕು ಸಂಖ್ಯೆಯ ಓಟಿಪಿ ದಾಖಲಿಸಲು ಮುಂದಾದರೆ ಮೊಬೈಲ್ ಗೆ ಇಂಟರ್‌ನೆಟ್ ಸಿಕ್ತಿಲ್ಲ ಎಂದು ಆಂಗ್ಲ ಭಾಷೆಯಲ್ಲಿ ಹೇಳುತ್ತದೆ! ಈ ಸಮಸ್ಯೆಯಿಂದ ಎಷ್ಟೋಮಾದರಿಯ ಸ್ಮಾರ್ಟ್ ಮೊಬೈಲ್ ಆ್ಯಪ್ ಬಳಕೆಯಿಂದ ದೂರ ಉಳಿಯುವಂತೆಯೂ ಆಗಿದೆ ಎಂಬ ಅಸಮಾಧಾನದ ಮಾತುಗಳೂ ಕೇಳಿ ಬಂದಿವೆ. ಕೆಲವು ಮೊಬೈಲ್‌ಗೆ ಹತ್ತಾರು ಸಲ ದಾಖಲಿಸಿದ ಬಳಿಕ, ಪುನಃ ಓಟಿಪಿ ಪಡೆದ ಬಳಿಕ ನಂಬರ್ ಬರುವದೂ ಆಗಿದೆ!
ತೋಟ ಅಲೆಸುತ್ತೆ!: ಮಳೆಗಾಲ ಆಗಿದ್ದರಿಂದ ಅಡಕೆ, ತೋಟ, ಭತ್ತದ ಗದ್ದೆ ಓಡಾಟ ಮಾಡುವುದೂ ಕಷ್ಟವೇ. ಆದರೆ, ಕೈಲಿ ಮೊಬೈಲ್ ಹಿಡಿದುಕೊಂಡು ಸರ್ವೇ ನಂಬರ್ ದಾಖಲಿಸಿ ಫೋಟೊ ಹಾಗೂ ಇತರ ವಿವರ ದಾಖಲಿಸಲು ಒಮ್ಮೆ ಬಂತೆಂದು ನಿಂತಲ್ಲೇ ನಿಂತರೂ ನೀವು ನಿಮ್ಮ ಕೃಷಿ ಭೂಮಿಯ ಒಳಗೆ ಹೋಗಿ ಎಂಬ ಹೇಳಿಕೆ ಬರುತ್ತದೆ. ಒಂದು ಬೆಳೆ ದಾಖಲಿಸಿದ ಬಳಿಕ ಮತ್ತೂಂದು ಬೆಳೆ ದಾಖಲಿಸು ಇಡೀ ತೋಟ ಓಡಾಟ ಮಾಡಿದರೂ ಜಿಪಿಎಸ್ ಲಿಂಕ್ ಸಿಗದೇ ಒದ್ದಾಟ ಮಾಡಬೇಕಾಗಿದೆ. ಒಂದು ಬೆಳೆಯ ಮಾಹಿತಿ ಭರಣ ಮಾಡಲು ಒಂದು ತಾಸು ಜಿಪಿಎಸ್ ಹುಡುಕಾಟ ನೆಡಸಬೇಕಾಗುತ್ತದೆ. ಇದರ ಜೊತೆಗೆ ಬೆಳೆ ವಿವರಗಳ ಕೋಡ್ ಹುಡುಕಿ ದಾಖಲಿಸಲು ಸಮಯಬೇಕು.
ಯಾವುದು ಮುಖ್ಯ ಬೆಳೆ?: ಮೊಬೈಲ್ ಆ್ಯಪ್ ಬಳಸುವ ರೈತರಲ್ಲಿ ಇನ್ನೊಂದು ಗೊಂದಲ ಬೆಳೆಗಾರರಲ್ಲಿ ಮೂಡಿದೆ. ಮುಖ್ಯ ಬೆಳೆ ಹಾಗೂ ಅಂತರ ಬೆಳೆಗಳ ಮಾಹಿತಿ ದಾಖಲಿಸಲು ಎರಡರಡಿಯೂ ಒಂದೇ ಬರಲಿದೆ. ಮುಖ್ಯ ಬೆಳೆ/ ಅಂತರ ಬೆಳೆ ಎರಡೂಒಂದೇ ತೋರಲಿದೆ. ಅಡಕೆ ಮುಖ್ಯ ಬೆಳೆಯಾದರೆ ಅದರ ಜೊತೆಗೆ ಕಾಳು ಮೆಣಸು, ಏಲಕ್ಕಿ, ಕೊಕ್ಕೋ ಕೂಡ ಮುಖ್ಯ ಬೆಳೆಯಷ್ಟೇ ದಾಖಲಿಸಲು ಅವಕಾಶ ಇದೆ. ಮೊದಲೆಲ್ಲ ಎಕರೆ ಅಡಕೆ ಜೊತೆಗೆ ಮೆಣಸು, ಏಲಕ್ಕಿ, ಕಾಳು ಮೆಣಸುಗಳನ್ನು 5, 10 ಗಂಟಾದಲ್ಲಿ ದಾಖಲಿಸಲಾಗುತ್ತಿತ್ತು. ಆದರೆ, ಈಗ ಕ್ಷೇತ್ರ ವಿಸ್ತಾರ ಕೂಡ ಆಗಲಿದೆ. ಸ್ವತಃ ಫೋಟೊ ಕೂಡ ಬಯಸುವುದರಿಂದ ಪುರಾವೆಗಳಿಗೆ ತೊಂದರೆ ಇಲ್ಲ. ಇನ್ನು ಒಂದು ಮಾಹಿತಿ ತಪ್ಪು ದಾಖಲಾದರೂ, ಮೊಬೈಲ್ ನಂಬರ್ ತಪ್ಪು ದಾಖಲಿಸಿದರೂ ಬೆಳೆ ದರ್ಶಕದಲ್ಲಿ ಅದೇ ನಂಬರ್ ಉಳಿಯುವ ಅಪಾಯವೂ ಇದೆ.
ಮಳೆಯ ಕಾರಣದಿಂದ ಜಿಪಿಎಸ್ ತೊಂದರೆ ಆಗುತ್ತಿರಬಹುದು. ಆದರೆ, ಇಡೀ ತೋಟ ಓಡಾಟ ಮಾಡಿ ನೂರಾರು ಸಲ ಚೆಕ್ ಮಾಡಬೇಕಾಗುತ್ತದೆ. ಒಂಥರಾ ಕಿರಿಕಿರಿ ಆಗಬಹದು. ಮುಖ್ಯ ಬೆಳೆ ಸಮಸ್ಯೆ ಕೂಡ ಇದೆ. ಅಡಕೆ ಇದ್ದಲ್ಲಿ ಮುಖ್ಯಬೆಳೆ ಕಾಳು ಮೆಣಸು ಆಗುವ ಅಪಾಯವಿದೆ.
-ಹೆಸರು ಹೇಳಲಿಚ್ಛಿಸದ ಅಧಿಕಾರಿ
ಪಹಣಿಯಲ್ಲಿ ಒಂದು ಗಿಡ ಕೂಡ ದಾಖಲಿ ಸಲು ಅವಕಾಶ ಇರುವದು ಬೆಳೆಗಾರರ ನೆಮ್ಮದಿಗೆ ಕಾರಣವಾಲಿದೆ. ಇದು ಭವಿಷ್ಯದ ಬೆಳೆಸಾಲ, ಬೆಳೆವಿಮೆಗಳಿಗೆ ಅವಕಾಶ ಸಿಗಲಿ.
-ಗಣಪತಿ ವೆಂ. ಹೆಗಡೆ ಸಾಲೇಕೊಪ್ಪ, ರೈತ
-ರಾಘವೇಂದ್ರ ಬೆಟ್ಟಕೊಪ್ಪ