Advertisement

ಜಿಪಿಎಗೆ ಬೆಲೆ ಇಲ್ಲ; ಸರ್ವರ್‌ ಮೊದಲೇ ಇಲ್ಲ!

11:39 AM May 29, 2022 | Team Udayavani |

ಶಿರಸಿ: ಕೋವಿಡೋತ್ತರ ಕಾಲದಲ್ಲಿ ಕೂಡ ಸರಳವಾಗಿ ರೈತರಿಗೆ ಫಸಲು ಸಾಲ ಸಿಗಬೇಕು ಎಂಬ ಆಶಯಕ್ಕೇ ಈಗ ಬೆಂಕಿ ಬಿದ್ದಿದೆ.

Advertisement

ರೈತರು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ದಿನವೂ ತೆರಳಿ ಬೆಳೆ ಸಾಲದ ಪಡೆದುಕೊಳ್ಳುವ ಬದಲಿಗೆ ಸರ್ವರ್‌ ಸಮಸ್ಯೆ, ಸರತಿ ಕಾರಣದಿಂದ “ಬೆವರು’ ಸಾಲವಾಗುತ್ತಿದೆ.

ರಾಜ್ಯದಲ್ಲಿನ ಕೋಟ್ಯಾಂತರ ರೈತರಿಗೆ ನೆರವಾಗುವ ಬೆಳೆ ಸಾಲವನ್ನು ರಾಜ್ಯ ಸರಕಾರ ಪ್ರತಿ ರೈತರಿಗೆ ಅವರವರ ಕೃಷಿ ಭೂಮಿ ಆಧರಿಸಿ ಶೂನ್ಯ ಬಡ್ಡಿಯಲ್ಲಿ ಗರಿಷ್ಠ ಮೂರು ಲಕ್ಷ ರೂ. ತನಕ ನಗದು ನೀಡುತ್ತಿತ್ತು. ಇದು ರೈತರಿಗೆ ಮುಂದಿನ ಬೆಳೆ ಕೊಯ್ಲು ಹಾಗೂ ಸಂಸ್ಕರಣೆ, ಸಂರಕ್ಷಣೆಗೆ ನೆರವಾಗುತ್ತಿದ್ದವು.

ರಾಜ್ಯ ಸರಕಾರ ನೀಡುವ ಬೆಳೆ ಸಾಲ ಶೂನ್ಯ ಬಡ್ಡಿದರ ಆಗಿರುವ ಹಿನ್ನೆಲೆಯಲ್ಲಿ ಇದರ ದುರ್ಬಳಕೆ ತಪ್ಪಿಸಬೇಕು ಎಂಬ ಕಾರಣಕ್ಕೆ ಸಹಕಾರ ಇಲಾಖೆ ಈ ಬಾರಿ ಇ.ಸಾಲ ಎಂಬ ಹೊಸ ಪದ್ಧತಿ ಜಾರಿಗೆ ತಂದಿದೆ. ಇ ಸಾಲದಲ್ಲಿನ ಫ್ರುಟ್ಸ್‌ ಐಡಿ ಮಾಡಿ ಸಾಲ ಪಡೆದರೆ ಅದು ಪಹಣಿಗೂ ದಾಖಲಾಗುತ್ತದೆ.

ಇ.ಸಾಲ ಪಡೆಯಲು ಪಹಣಿದಾರ ರೈತ ಆಯಾ ವ್ಯಾಪ್ತಿಯ ಸೇವಾ ಸಹಕಾರಿ ಸಂಘಕ್ಕೆ ತೆರಳಿ ಬೆಳೆಸಾಲ ಪಡೆಯಬೇಕು. ಸಾಲ ಪಡೆಯಲು ಆರ್‌ಟಿಸಿ ಜೊತೆಗೆ ಆಧಾರ ಕಾರ್ಡ್‌, ಪಾನ್‌ ಕಾರ್ಡ್‌ ಹಾಗೂ ರೇಶನ್‌ ಕಾರ್ಡ್‌ ಒಯ್ಯಬೇಕು. ಆಧಾರ ಮೊಬೈಲ್‌ ಲಿಂಕ್‌ ಇರದೇ ಇದ್ದರೆ ಒಟಿಪಿ ಸಮಸ್ಯೆ ಕೂಡ ಆಗುತ್ತದೆ.

Advertisement

ಇ.ಸಾಲ ಪಡೆಯಲು ಕೃಷಿ ಕ್ಷೇತ್ರ, ಬೆಳೆಸಾಲ ಮೊತ್ತ ಎಲ್ಲ ಅಂತರ್ಜಾಲದ ಮೂಲಕ ಫ್ರುಟ್ಸ್‌ ಐಡಿ ದಾಖಲಿಸಿದ ಬಳಿಕ ರೈತರು ಬೆರಳಚ್ಚು ಕೊಡಬೇಕು. ಆದರೆ, ಎಷ್ಟೋ ರೈತರಿಗೆ ಥಂಬ್‌ ಕೊಟ್ಟರೂ ಅದು ತೆಗೆದುಕೊಳ್ಳುತ್ತಿಲ್ಲ. ಈ ಮಧ್ಯೆ ಹತ್ತು ಸರ್ವೆ ನಂಬರಗಿಂತ ಹೆಚ್ಚಿದ್ದರೆ ರೈತರ ನೋಂದಣಿಯ ಫ್ರುಟ್ಸ್‌ ಐಡಿ ಇನ್ನೊಂದು ಮಾಡಬೇಕು. ಅದು ಆಗದೇ ಇದ್ದರೆ ಕೃಷಿ, ತೋಟಗಾರಿಕಾ ಇಲಾಖೆ ಕಚೇರಿಗೆ ಅಲೆದು ಫ್ರುಟ್ಸ್‌ ಐಡಿ ಸೃಷ್ಟಿಸಿಕೊಳ್ಳಬೇಕು.

ಜಂಟಿಖಾತೆ ಇದ್ದರೆ ಈ ಮೊದಲು ಬಳಕೆ ಇದ್ದ ಕಾರ್ಯ ನಿರ್ವಹಣಾ ಹಕ್ಕುಪತ್ರ ಜಿಪಿಎಗೆ ಈಗ ಬೆಲೆ ಇಲ್ಲ. ಬದಲಿಗೆ ಆರ್‌ಟಿಸಿಯಲ್ಲಿ ಇರುವ ಎಲ್ಲರ ಹೆಸರಿನ ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಓಟಿಪಿ ಬರುವ ಮೊಬೈಲ್‌ ಬೇಕು. ಎಷ್ಟೋ ಕುಟುಂಬದ ಹೆಣ್ಮಕ್ಕಳು ಮದುವೆ ಆಗಿ ದೂರದ ಊರಲ್ಲಿದ್ದರೂ ಅವರು ಬರಬೇಕು, ಪಾಸ್‌ಬುಕ್‌ ಕೊಡಬೇಕು. ಫ್ರುಟ್ಸ್‌ ಐಡಿ ಸೃಷ್ಟಿಸಿಕೊಳ್ಳಬೇಕು. ಈ ಮಧ್ಯೆ ಕಳೆದ 24 ಗಂಟೆಗಳಿಂದ ಫ್ರುಟ್ಸ್‌ ಐಡಿ ಸೃಷ್ಟಿಸುವ ಸರ್ವರ್‌ ಕೆಲಸವನ್ನೇ ಮಾಡುತ್ತಿಲ್ಲ. ಇದರಿಂದ ರೈತರು ಬೆಳೆ ಸಾಲ ಪಡೆಯಲು ಬಂದವರು ವಾಪಸ್‌ ಹೋಗುತ್ತಿದ್ದಾರೆ.

ಈಗಾಗಲೇ ಕಳೆದ ಏ.30 ರೊಳಗೆ ತುಂಬಿದ ರೈತರಿಗೆ ಮತ್ತೆ ಸಾಲ ಸಿಗದೆ ಸಮಸ್ಯೆ ಆಗುತ್ತಿದೆ. ಹಳೆ ಪದ್ಧತಿಯಲ್ಲಿ ವಾರದೊಳಗೆ ಸಿಗುತ್ತಿದ್ದ ಸಾಲ ಈಗ ಸರ್ವರ್‌ ಇದ್ದಾಗ ಪಡೆಯುವ ಸ್ಥಿತಿ ಬಂದಿದೆ. ವೃದ್ದರು, ಮಹಿಳೆಯರೂ ಸಹಕಾರಿ ಸಂಘಗಳಿಗೆ ಅಲೆದಾಟ ಮಾಡುವಂತೆ ಆಗಿದೆ.

ಹಳೆ ಮಾದರಿಯಲ್ಲಿ ಬೆಳೆಸಾಲ ನೀಡುವಂತೆ ಅದರ ದಾಖಲೆ ಜೊತೆಗೆ ಇ ಸಾಲಕ್ಕೂ ಕೆಲಸ ನೀಡಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್‌, ಇಂಟ್ರನೆಟ್‌ ಸರಿ ಇಲ್ಲದೇ ಸಮಸ್ಯೆ ಆಗುತ್ತಿದೆ. ಸರ್ವರ್‌ ಕೂಡ ಕೈಕೊಟ್ಟಿದೆ.  –ಎಂ.ಎಸ್‌. ಹೆಗಡೆ, ಸೊಸೈಟಿ ನೌಕರ

ಹಳೇ ಪದ್ಧತಿ ಉತ್ತಮ. ಹೊಸ ಪದ್ಧತಿಯಿಂದ ನನ್ನ ಅಕ್ಕ ತಂಗಿಯರ ಫ್ರುಟ್ಸ್‌ ಐಡಿ ಮಾಡಿಸಬೇಕಾಗಿದೆ. ಸಿಗೋ ಸಾಲಕ್ಕೆ ಅಕ್ಕ ತಂಗಿ ಕರೆಸಿ ಕಳಿಸಲೂ 5-6 ಸಾವಿರ ವೆಚ್ಚ ಆಗುತ್ತದೆ.  -ಜಿ.ಎಲ್‌. ಹೆಗಡೆ ರೈತ

 -ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next