Advertisement

ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಖುಷಿಯೊಂದಿಗೆ ಗೌರಿ ಆಗಮನ

03:08 PM Sep 09, 2021 | Team Udayavani |

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಬುಧವಾರ ಗೌರಿ-ಗೌಣೇಶ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಇದಕ್ಕೆ ಹೂ-ಹಣ್ಣು ಬೆಲೆ ಇಳಿಕೆಯ ಸಂತಸವು ಜತೆಯಾಗಿತ್ತು. ಗುರುವಾರ ಗೌರಿ, ಶುಕ್ರವಾರ ಗಣೇಶ ಹಬ್ಬ. ಕಳೆದ ಬಾರಿಗೆ ಹೋಲಿಸಿದರೆ ಕೋವಿಡ್‌ ಸೋಂಕು ಆತಂಕ ಕಡಿಮೆ ಇದ್ದು, ಹಬ್ಬವನ್ನು ವಿಶೇಷವಾಗಿ ಆಚರಿಸಲು ಜನರು ಸಜ್ಜಾಗಿದ್ದಾರೆ. ಇದಕ್ಕಾಗಿ ಬುಧವಾರ ಹಬ್ಬದ ಖರೀದಿಯನ್ನು ಆರಂಭಿಸಿದ್ದಾರೆ. ಪ್ರಮುಖ ವಾಗಿ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಕೆ.ಆರ್‌ಪುರ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ
ಜನಜಂಗುಳಿ ಇತ್ತು.

Advertisement

ಹೂ, ಹಣ್ಣು, ಬಾಳೆ ಕಂದು, ಗೌರಿ – ಗಣೇಶ ಮೂರ್ತಿಗಳ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳ ಮಾರಾಟ ಬಿರುಸಾಗಿ ಸಾಗಿತ್ತು. ಕೋವಿಡ್‌ ಲಾಕ್‌ಡೌನ್‌ ಇಲ್ಲದಕಾರಣ ಈ ಬಾರಿ ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವ ಹಾಗೂ ಹಣ್ಣುಗಳು ಆಗಮಿಸಿದೆ. ಹೀಗಾಗಿ, ಬೆಲೆ ಏರಿಕೆ ಬಿಸಿ ಇರಲಿಲ್ಲ. ಎರಡು ವಾರದ ಹಿಂದೆ ನಡೆದ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ಹೂ, ಹಣ್ಣುಗಳ ದರವೂ ಗ್ರಾಹಕರ ಕೈಗೆಟುಕುವಂತಿದೆ.

ಈ ಬಾರಿ ಹೆಚ್ಚಿನ ಮಳೆ ಆಗಿರುವುದರಿಂದ ತಮಿಳುನಾಡು ಹಾಗೂ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಆನೇಕಲ್‌ ಮತ್ತಿತರ
ಭಾಗಗಳಿಂದ ಹೂವು ಹೆಚ್ಚಾಗಿ ಬರುತ್ತಿದೆ. ಹೀಗಾಗಿ ಸೇವಂತಿಗೆ ಹೂವಿನ ಬೆಲೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪಟ್ಟದ ಲೆಕ್ಕಾಚಾರ; ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾಪೌರ?

ಇಂದು ಗೌರಿ ಆಗಮನ ಸಂಭ್ರಮ: ನಗರದಲ್ಲಿ ಗೌರಿ ಹಬ್ಬ ಆಚರಣೆಗೆ ಸಿದ್ಧತೆ ಜೋರಿದ್ದು, ಗುರುವಾರ ಗಣೇಶ ದೇವಸ್ಥಾನಗಳಲ್ಲಿ ವಿಶೇಷ
ಪೂಜೆ, ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಬುಧವಾರ ಮಾರುಕಟ್ಟೆಗಳಲ್ಲಿ ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ ಹೀಗೆ
ಹಲವು ಹೆಸರಿನಲ್ಲಿ ಗೌರಿ ಮೂರ್ತಿಗಳ ಖರೀದಿ ಭರದಿಂದ ಸಾಗಿತ್ತು. ಗೌರಿ ಮೂರ್ತಿಗಳು 50-100 ರೂ. ನಿಂದ ಆರಂಭವಾಗಿ 2 ಸಾವಿರ ರೂ.ವರೆಗೆ ದರವಿದೆ. ಇನ್ನು ಗಣೇಶನ ಮಣ್ಣಿನ ಮೂರ್ತಿಗಳು ಎತ್ತರ ಮತ್ತು ವಿನ್ಯಾಸಕ್ಕೆ ತಕ್ಕಂತೆ 100 ರೂ. ನಿಂದ 20 ಸಾವಿರ ರೂ.ವರೆಗಿವೆ. ಮಾರಾಟಕ್ಕಿವೆ. ಜತೆಗೆ ಹೆಣ್ಣು ಮಕ್ಕಳಿಗೆ ನೀಡಲು ಬಾಗೀನ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿತ್ತು.

Advertisement

ಲಾಕ್‌ಡೌನ್‌ ಇಲ್ಲದಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಹಬ್ಬದ ವ್ಯಾಪಾರ ಹೆಚ್ಚಿದೆ. ಬೆಲೆಯೂ ಕೂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ಕಡಿಮೆ ಇದೆ. ಇನ್ನೆರಡು ದಿನ ಹೆಚ್ಚಿನ ವ್ಯಾಪಾರವಾಗುವ ನಿರೀಕ್ಷೆ ಇದೆ.
– ಸಂಗಮೇಶ್‌, ವರ್ತಕ, ಮಲ್ಲೇಶ್ವರ ಮಾರುಕಟ್ಟೆ

ಕಳೆದ ವರ್ಷ ಕೋವಿಡ್‌ ಭಯದಿಂದ ಗೌರಿಗಣೇಶ ಹಬ್ಬ ಆಚರಿಸಿರಲಿಲ್ಲ. ಈ ಬಾರಿ ಕುಟುಂಬಸ್ಥರೆಲ್ಲರೂ ಲಸಿಕೆ ಪಡೆದಿದ್ದು, ಭಯವಿಲ್ಲದೆ ಶಾಸ್ತ್ರೋಕ್ತವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಹಬ್ಬಕ್ಕೆ ಬೇಕಾಗ ಸಾಮಗ್ರಿಖರೀದಿಸುತ್ತಿದ್ದು, ಬೆಲೆ ಏರಿಕೆ ಅಷ್ಟಾಗಿ ಇಲ್ಲ.
– ಆಶಾ, ಗೃಹಿಣಿ, ಎನ್‌.ಆರ್‌.ಕಾಲೋನಿ

Advertisement

Udayavani is now on Telegram. Click here to join our channel and stay updated with the latest news.

Next