ಬೆಂಗಳೂರು: ಜೆಡಿಎಸ್‌ನಿಂದ ಅಮಾನತುಗೊಂಡಿರುವ ಭಿನ್ನಮತೀಯ ಶಾಸಕರ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜತೆಗೆ ನಿರಂತರ ಸಭೆ, ಸಮಾವೇಶ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು
ನಿರ್ಧರಿಸಿದ್ದಾರೆ.
ಈ ನಿಟ್ಟಿನಲ್ಲಿ ಚಾಮರಾಜಪೇಟೆ ನಂತರ ಇದೀಗ ಮಾಗಡಿ ಕ್ಷೇತ್ರದಲ್ಲಿ ಸಮಾವೇಶಕ್ಕೆ ಮುಂದಾಗಿದ್ದು, ಹೋಬಳಿಗೊಂದು ಸಮಾವೇಶ ಮಾಡಲು ನಿರ್ಧರಿಸಲಾಗಿದೆ.ಬುಧವಾರ ಕ್ಷೇತ್ರದ ಮುಖಂಡರ ಜತೆ ಸಮಾಲೋಚನೆ ನಡೆಸಲಿರುವ ದೇವೇಗೌಡರು ಸಮಾವೇಶದ ದಿನಾಂಕ ನಿಗದಿಗೊಳಿಸಲು ತೀರ್ಮಾನಿಸಿದ್ದಾರೆ.
ಮಾಗಡಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ದೇವೇಗೌಡರು, ಈಗಾಗಲೇ ಕಾಂಗ್ರೆಸ್‌ನ ಜಿ.ಪಂ. ಸದಸ್ಯ ಮಂಜು ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಪ್ರತಿಹಳ್ಳಿಗೆ ಭೇಟಿ ನೀಡಿ ಕೆಲಸ ಆರಂಭಿಸುವಂತೆ ಸೂಚಿಸಿದ್ದಾರೆ. ಜತೆಗೆ ಕುಮಾರ ಸ್ವಾಮಿ ಹಾಗೂ ಅನಿತಾಕುಮಾರಸ್ವಾಮಿ ಅವರಿಗೂ ರಾಮನಗರ, ಚನ್ನಪಟ್ಟಣದ ಜತೆ ಮಾಗಡಿ ಕ್ಷೇತ್ರದಲ್ಲೂ ಪ್ರವಾಸ ಕೈಗೊಂಡು ಕಾರ್ಯಕರ್ತರ ಜತೆ ಸಂಪರ್ಕ ಸಾಧಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.