ನವದೆಹಲಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಎಲ್‌ಐಸಿ ಐಪಿಒದ ಮೇಲೆ ಪರಿಣಾಮ ಬೀರಲಿದೆಯೇ?
ಹೌದು ಎನ್ನುತ್ತಿವೆ ಮೂಲಗಳು. ಜಗತ್ತಿನ ಬಹುತೇಕ ಷೇರುಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿದ್ದು, ಇಂಥ ಸಮಯದಲ್ಲಿ ಎಲ್‌ಐಸಿ ಐಪಿಒ ಬಿಡುಗಡೆ ಮಾಡಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ.
ಎಲ್‌ಐಸಿ ಐಪಿಒ ಮುಂದೂಡಿಕೆ ಬಗ್ಗೆ ಸ್ವತಃ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸುಳಿವು ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಆರಂಭದ ದಿನಗಳಲ್ಲಿ ಕಾದು ನೋಡುವ ತಂತ್ರದ ಮೊರೆ ಹೋಗಿದ್ದೇವೆ ಎಂದಿದ್ದ ನಿರ್ಮಲಾ ಅವರು, ಈಗ ಈ ಎರಡು ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯುತ್ತಿರುವುದರಿಂದ ಮರುಚಿಂತನೆ ನಡೆಸಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಖಾಲಿ ಡಬ್ಬದಲ್ಲಿ ಸದ್ದು ಮಾಡಲು ಸಿದ್ದು-ಡಿಕೆಶಿ ಯತ್ನ: ಸಚಿವ ಅಶೋಕ್
ಅಲ್ಲದೆ, ದೇಶದ ವಿಚಾರದಲ್ಲಿ ನೋಡುವುದಾದರೆ, ಎಲ್‌ಐಸಿ ಐಪಿಒವನ್ನು ಈಗ ಬಿಡುಗಡೆ ಮಾಡಬಹುದು. ಆದರೆ, ಅಂತಾರಾಷ್ಟ್ರೀಯ ಸ್ಥಿತಿಗತಿ ನೋಡಿದರೆ, ಇದರ ಬಗ್ಗೆ ಮತ್ತೂಮ್ಮೆ ಚರ್ಚಿಸಬೇಕಾಗಿದೆ ಎಂದು ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ, ಮಾರ್ಚ್ ಎರಡನೇ ವಾರದಲ್ಲೇ ಎಲ್‌ಐಸಿ ಐಪಿಒ ಬಿಡುಗಡೆಯಾಗಬೇಕಿತ್ತು. ಜತೆಗೆ, ಕೇಂದ್ರ ಸರ್ಕಾರವೂ ಇದರಿಂದ ಸುಮಾರು 1 ಲಕ್ಷ ಕೋಟಿ ರೂ. ಬಂಡವಾಳವನ್ನು ನಿರೀಕ್ಷೆ ಮಾಡುತ್ತಿದೆ. ಈ ಸಮಯದಲ್ಲಿ ಖರೀದಿದಾರರು ಮುಂದೆ ಬರದಿದ್ದರೆ ಎಂಬ ಆತಂಕವೂ ಇದೆ.