Advertisement

ವಿವಾಹ ವಯೋಮಿತಿ ಏರಿಕೆ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ: ಪ್ರಧಾನಿ ಮೋದಿ

08:33 PM Dec 21, 2021 | Team Udayavani |

ಪ್ರಯಾಗ್‌ರಾಜ್‌: “ಹೆಣ್ಣುಮಕ್ಕಳಿಗೆ ವ್ಯಾಸಂಗ ಮಾಡಲು ಮತ್ತು ಪ್ರಗತಿ ಸಾಧಿಸಲು ಸಮಯ ಸಿಗಲಿ ಎಂಬ ಕಾರಣಕ್ಕೆ ಸರ್ಕಾರವು ಅವರ ವಿವಾಹದ ವಯಸ್ಸನ್ನು ಈಗಿರುವ 18ರಿಂದ 21ಕ್ಕೆ ಏರಿಸಲು ಪ್ರಯತ್ನಿಸುತ್ತಿದೆ. ಆದರೆ, ಇದು ಕೆಲವರಿಗೆ ರುಚಿಸುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಂಗಳವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ದೇಶದ ಹೆಣ್ಣುಮಕ್ಕಳಿಗಾಗಿ ಸರ್ಕಾರ ಮದುವೆ ವಯಸ್ಸಿನ ಮಿತಿ ಏರಿಸಲು ಮುಂದಾಗಿದೆ. ಆದರೆ, ಇದರಿಂದ ಸಮಸ್ಯೆ ಆಗುತ್ತಿರುವುದು ಯಾರಿಗೆ ಎಂಬುದು ಎಲ್ಲರಿಗೂ ಈಗ ಗೊತ್ತಾಗುತ್ತಿದೆ’ ಎಂದು ಹೇಳುವ ಮೂಲಕ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿರುವ ಸಮಾಜವಾದಿ ಪಕ್ಷದ ಮುಖಂಡರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಇದೇ ವೇಳೆ, “ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾದ 30 ಲಕ್ಷ ಮನೆಗಳ ಪೈಕಿ 25 ಲಕ್ಷ ಮನೆಗಳು ಮಹಿಳೆಯರ ಹೆಸರಲ್ಲಿ ನೋಂದಣಿಯಾಗಿವೆ. ಉ.ಪ್ರದೇಶದಲ್ಲಿ ಈಗ ಮಹಿಳೆಯರಿಗೆ ಭದ್ರತೆ, ಹಕ್ಕುಗಳು ಹಾಗೂ ಅವಕಾಶಗಳಿವೆ. ನಮ್ಮೆಲ್ಲ ತಾಯಂದಿರು ಮತ್ತು ಸಹೋದರಿಯರು ರಾಜ್ಯವನ್ನು ಮತ್ತೆ ಕರಾಳತೆಗೆ ನೂಕುವುದಿಲ್ಲ ಎಂಬ ವಿಶ್ವಾಸ ನನಗಿದೆ’ ಎಂದೂ ಮೋದಿ ಹೇಳಿದ್ದಾರೆ.

ಇದನ್ನೂ ಓದಿ:ಎಂಇಎಸ್ ಪುಂಡಾಟಿಕೆ ವಿರುದ್ದ ಡಿ.24 ರಂದು ಬೃಹತ್ ಪ್ರತಿಭಟನೆ : ಸುಬ್ರಹ್ಮಣ್ಯ

ವೈರಲ್‌ ಆಯ್ತು ಫೋಟೋ
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮವಾರ ನವದೆಹಲಿಯಲ್ಲಿ ಭೇಟಿಯಾದ ಫೋಟೋ ಈಗ ವೈರಲ್‌ ಆಗಿದೆ. ಸೋಮವಾರ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊಮ್ಮಗಳ ವಿವಾಹ ಆರತಕ್ಷತೆಯಲ್ಲಿ ಅವರಿಬ್ಬರು ಭೇಟಿಯಾಗಿದ್ದರು. ಉ.ಪ್ರ.ಪ್ರದೇಶ ಕಾಂಗ್ರೆಸ್‌ ಸಮಿತಿ ಈ ಫೋಟೋ ಟ್ವೀಟ್‌ ಮಾಡಿ, “ಸಮಾಜವಾದಿ ಪಕ್ಷದ ಮೊದಲ ಪದ “ಎಸ್‌’ ಎಂದರೆ ಸಂಘವಾದವೇ’  ಎಂದು ಪ್ರಶ್ನಿಸಿದೆ. ಅದಕ್ಕೆ ತಿರುಗೇಟು ನೀಡಿದ ಉ.ಪ್ರ.ಬಿಜೆಪಿ ಘಟಕ “ಫೋಟೋವೇ ಎಲ್ಲವನ್ನೂ ಹೇಳುತ್ತದೆ ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next