ಹುಬ್ಬಳ್ಳಿ: ರಾಜ್ಯ ಸರಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆ ಮೇರೆಗೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಬಸ್‌ಗಳ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳ 9 ವಿಭಾಗಗಳ ವ್ಯಾಪ್ತಿಯಲ್ಲಿ ಬಸ್‌ಗಳು ಆರಂಭವಾಗಲಿವೆ. ಮೈಸೂರು ಜಿಲ್ಲೆ ಹೊರತು ಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್‌ಗಳು ಸಂಚಾರ ಮಾಡಲಿವೆ. ಸಂಸ್ಥೆ ವ್ಯಾಪ್ತಿಯಲ್ಲಿ ಸುಮಾರು 4,890 ಶೆಡ್ನೂಲ್‌ಗಳು ಇದ್ದು, ಸೋಮವಾರ ಶೇ. 20-30 ಶೆಡ್ನೂಲ್ ಗಳು ಅಂದರೆ ಸುಮಾರು 1,200ರಿಂದ 1,500 ಬಸ್‌ಗಳ ಕಾರ್ಯಾಚರಣೆ ನಡೆಸಲು ಸಂಸ್ಥೆ ನಿರ್ಧರಿಸಿದೆ. ಆತಂಕ ಬೇಡ: ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾ ಬಸ್‌ಗಳನ್ನು ಸ್ಯಾನಿಟೈಸೇಷನ್ ಮಾಡಿ ಸುಸ್ಥಿತಿಯಲ್ಲಿಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಶೇ.92 ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಕೋವಿಡ್ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.
ಬಸ್‌ಗಳಲ್ಲಿ ಕೋವಿಡ್ ನಿಯಮಗಳನ್ನು ಪ್ರಯಾಣಿಕರು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ. ಶೇ.50 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಕಾರ್ಯಾಚರಣೆ ನಡೆಯಲಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಪ್ರಯಾಣಿಕರು ಕುಳಿತುಕೊಳ್ಳುವ ಮೂರು ಆಸನಗಳಲ್ಲಿ ಇಬ್ಬರಿಗೆ ಹಾಗೂ ಎರಡು ಆಸನದಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುತ್ತದೆ. ವಾರಾಂತ್ಯ ಕರ್ಫ್ಯೂ ಅವಧಿ ಹಾಗೂ ರಾತ್ರಿ ವೇಳೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಪ್ರತಿಕ್ರಿಯೆ ಗಮನಿಸಿ ವಿಸ್ತರಣೆ: ಮೊದಲ ಹಂತದಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ ಮತ್ತಿತರ ಪ್ರಮುಖ ಬಸ್ ನಿಲ್ದಾಣಗಳಿಂದ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮತ್ತು ಇತರ ಪ್ರಮುಖ ಸ್ಥಳಗಳಿಗೆ ಬಸ್ ಸಂಚರಿಸಲಿದೆ. ಬೆಳಗ್ಗೆಯಿಂದ ಸಂಜೆ 7 ಗಂಟೆ ವರೆಗೆ ಬಸ್‌ಸಂಚರಿಸಲಿದೆ. ನೆರೆಯ ಗದಗ, ಇಳಕಲ್, ಬಾಗಲಕೋಟೆ, ವಿಜಯಪುರ, ಹಾವೇರಿ, ದಾವಣಗೆರೆ, ಶಿರಸಿ, ಬೆಳಗಾವಿ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ದೂರದ ಊರುಗಳಿಗೆ ವಿಸ್ತರಿಸಲು ಕ್ರಮ ವಹಿಸಲಾಗುತ್ತದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2216 ನೌಕರರಿದ್ದಾರೆ. ಅವರಲ್ಲಿ 1500ಕ್ಕೂ ಹೆಚ್ಚು ಚಾಲಕರು-ನಿರ್ವಾಹಕರಿದ್ದು, ಶೇ. 97 ಮಂದಿ ಮೊದಲನೇ ಡೋಸ್ ಪಡೆದುಕೊಂಡಿದ್ದಾರೆ.