ಕಲಬುರ್ಗಿ: ಲೋಕೋಪಯೋಗಿ ಇಲಾಖೆಗೆ ಈ ಬಾರಿ ಬಜೆಟ್ ನಲ್ಲಿ15 ಸಾವಿರ ರೂ ಕೋಟಿ ಅನುದಾನ ತೆಗೆದಿರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನೆರೆಹಾವಳಿಯಿಂದಾಗಿ ರೂ. 7021 ಕೋಟಿ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಇಲಾಖೆಗೆ ರೂ. 9450 ಕೋಟಿ ಅನುದಾನ ಹಂಚಿಕೆಯಾಗಿತ್ತು. ನೆರೆ ಹಾವಳಿಗೆ ಹಾನಿಗೀಡಾದ ರಸ್ತೆ, ಸೇತುವೆಗಳ ದುರಸ್ತಿಗಾಗಿ ಹೆಚ್ಚಿನ ಅನುದಾನಕ್ಕಾಗಿ ರೂ.15 ಸಾವಿರ ಕೋಟಿ ನೀಡುವಂತೆ ಕೋರಲಾಗಿದೆ ಎಂದರು.
ಬೆಂಬಲ ಬೆಲೆಯಡಿ 10 ಕ್ವಿಂಟಲ್ ಬದಲಾಗಿ 20 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಹೆಚ್ಚಿನ ಖರೀದಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದರು.
ಕಡಲೆಯನ್ನು ಬೆಂಬಲ ಬೆಲೆಗೆ ರಾಜ್ಯದಿಂದಲೂ ಪಾಲು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಏಪ್ರಿಲ್ ನಲ್ಲಿ ಹೊಸ ಅಧ್ಯಕ್ಷರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ ಡಿಬಿ )ಮಂಡಳಿಗೆ ಏಪ್ರಿಲ್ ನಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ ಎಂದು ಕಾರಜೋಳ ಸ್ಪಷ್ಟಪಡಿಸಿದರು. ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಉಪಸ್ಥಿರಿದ್ದರು.