ವಿಧಾನಸಭೆ: ಕೃಷ್ಣಾ ಮೇಲ್ದಂಡೆ ಯೋಜನೆಗಳಿಗಾಗಿ ನಮ್ಮ ಮುಂಬಯಿ ಕರ್ನಾಟಕದ ಜನ ಇಂದಿರಾಗಾಂಧಿ, ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದ್ದೇವೆ. ಆದರೆ ಇಂದಿಗೂ ನೀರಾವರಿ ಕನಸು ನನಸಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೋಯ್ನಾ ಆಣೆಕಟ್ಟು ಕಟ್ಟುವಾಗ ರಾಜ್ಯದಲ್ಲಿ ತ್ರಿಬಲ್ ಎಂಜಿನ್ ಸರಕಾರ ಇತ್ತು. ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಕೇಂದ್ರದಲ್ಲೂ ಕಾಂಗ್ರೆಸ್ ಸರಕಾರ ಇತ್ತು. ಆದರೆ ಮುಂಬಯಿ ಕರ್ನಾಟಕದ ನೀರಾವರಿ ಯೋಜನೆಗೆ ಅಗತ್ಯವಾದ ಎರಡು ಕೋಟಿ ರೂ.ನ್ನು ಅಂದಿನ ಸರಕಾರ ನೀಡಲಿಲ್ಲ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ನಾವು ಇಂದಿರಾಗಾಂಧಿ, ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದ್ದೇವೆ. ತುಲಾಭಾರಕ್ಕೆ ಬಂಗಾರ ಕಡಿಮೆ ಆದಾಗ ನೋಡಲು ಬಂದ ಹೆಣ್ಣು ಮಕ್ಕಳು ತಮ್ಮ ಕೈ ಬಳೆ ದಾನ ಮಾಡಿದ್ದರು. ಆದರೆ ಆಲಮಟ್ಟಿ ಯೋಜನೆಗೆ ಶಂಕು ಸ್ಥಾಪನೆಯಾಗಿದ್ದು 1964ರಲ್ಲಿ. ಅಂದೇ ಹಣ ಸಿಕ್ಕಿದ್ದರೆ ಈ ಪರಿಸ್ಥತಿ ಬರುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಾದಯಾತ್ರೆಯಿಂದ ನೀರು ಬರಲ್ಲ; ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿಕೆ ಕಿಡಿ
ಕಾಂಗ್ರೆಸ್ ನಡಿಗೆ, ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ವಾರ್ಷಿಕ 10000 ಕೋಟಿ ರೂ.ನಂತೆ, 50000 ಕೋಟಿ ರೂ.ನ್ನು ಕೃಷ್ಣಾ ನೀರಾವರಿ ಯೋಜನೆಗಳ ಮುಕ್ತಾಯಕ್ಕೆ ಕೊಡುತ್ತೇವೆ ಎಂದು ಕಾಂಗ್ರೆಸಿನವರು ಭರವಸೆ ನೀಡಿದ್ದರು. ಆದರೆ ಕೊಟ್ಟಿದ್ದು 7000 ಕೋಟಿ ರೂ. ಮಾತ್ರ. ಅಧಿಕಾರಕ್ಕಾಗಿ ಈಗ ಮತ್ತೆ ಪಾದಯಾತ್ರೆ ನಡೆಸುವುದಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.