ಹುಬ್ಬಳ್ಳಿ: ಸರ್ಕಾರಿ ಇಲಾಖೆಗಳ ವಿದ್ಯುತ್ ಶುಲ್ಕ ಬಾಕಿ ಇಂಧನ ಇಲಾಖೆಗೆ ತೀವ್ರ ಸಂಕಷ್ಟ ತಂದೊಡ್ಡಿದ್ದು, ಹೆಸ್ಕಾಂ ನೀಡಿದ ಶಾಕ್ ಪರಿಣಾಮ ಕೆಲ ಇಲಾಖೆಗಳು ಬಾಕಿ ಪಾವತಿಗೆ ಮುಂದಾಗಿವೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆ ಬಾಕಿ ಮಾತ್ರ ಏರುಗತಿಯಲ್ಲಿದ್ದು, ನೋಟಿಸ್ ಗೂ ಕೆಲ ಇಲಾಖೆಗಳು ಡೋಂಟ್ ಕೇರ್ ಎನ್ನುತ್ತಿವೆ.
ಸರ್ಕಾರಿ ಇಲಾಖೆಗಳು ಸೇರಿದಂತೆ ಇತರರ ವಿದ್ಯುತ್ ಶುಲ್ಕ ಬಾಕಿ ಪರಿಣಾಮ ಪ್ರತಿವರ್ಷ ಹೆಸ್ಕಾಂ ಬಡ್ಡಿ ರೂಪದಲ್ಲಿ ವಿದ್ಯುತ್ ಖರೀದಿ ಕಂಪನಿಗಳಿಗೆ ನೂರಾರು ಕೋಟಿ ರೂ. ಪಾವತಿಸುತ್ತಿದೆ. ಕಳೆದ ವರ್ಷ ಸುಮಾರು 620 ಕೋಟಿಗೂ ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಪಾವತಿಸಿದೆ. ಹೀಗಾಗಿ ರಾಜ್ಯದ ಎಸ್ಕಾಂಗಳು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಹಿಂಬಾಕಿ ವಸೂಲಿಗೆ ವಿಶೇಷ ಟಾಸ್ಕ್ನೊಂದಿಗೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ನೋಟಿಸ್ ಜಾರಿ ಮಾಡಿ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ಕೆಲ ಇಲಾಖೆಗಳು ಬಾಕಿ ಪಾವತಿಗೆ ಮನಸ್ಸು ಮಾಡಿವೆ. ಆದರೂ ಫೆಬ್ರವರಿ ಅಂತ್ಯಕ್ಕೆ ವಿವಿಧ ಸರ್ಕಾರಿ ಇಲಾಖೆಗಳಿಂದ ಹೆಸ್ಕಾಂಗೆ ಬರೋಬ್ಬರಿ 578 ಕೋಟಿ ರೂ. ಬಾಕಿ ಉಳಿದಿದೆ!
ಯಾರ್ಯಾರಿಂದ ಪಾವತಿ? ತುರ್ತು ಕಾರ್ಯಗಳನ್ನು ಹೊಂದಿರುವ ಕಚೇರಿಗಳನ್ನು ಹೊರತುಪಡಿಸಿ ಶಾಲೆ, ಕಾಲೇಜು, ಜಿಪಂ-ತಾಪಂ, ನೀರಾವರಿ ಇಲಾಖೆ ಸೇರಿದಂತೆ ಬಾಕಿ ಹೊಂದಿರುವ ಇತರೆ ಇಲಾಖೆಗಳ ವಿದ್ಯುತ್ ಸಂಪರ್ಕ ಕಡಿತದಂತಹ ಕ್ರಮಕ್ಕೆ ಹೆಸ್ಕಾಂ ಮುಂದಾಗಿದೆ. ಉಪ ವಿಭಾಗ ವ್ಯಾಪ್ತಿಯಲ್ಲಿಯೇ ಅಲ್ಲಿನ ಅಧಿಕಾರಿಗಳಿಗೆ ಸಂಬಂಧಿಸಿದ ಕಚೇರಿಗಳಿಗೆ ಪ್ರತಿ ತಿಂಗಳು ನೋಟಿಸ್ ನೀಡಿ ಬಾಕಿ ವಸೂಲಿಗೆ ಮುಂದಾಗಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯ ಬಾಕಿಯಲ್ಲಿ ಇತ್ತೀಚೆಗೆ 24 ಕೋಟಿ ರೂ. ಪಾವತಿಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ 50 ಕೋಟಿ ರೂ. ಪಾವತಿಸಿದೆ. ಕೈ ಮಗ್ಗ ಹಾಗೂ ಜವಳಿ ಇಲಾಖೆ 4 ಕೋಟಿ, ಕೃಷ್ಣ ಭಾಗ್ಯ ಜಲನಿಗಮ ಸುಮಾರು 3 ಕೋಟಿ ರೂ. ಪಾವತಿಸಿದೆ. ಬಹು ಗ್ರಾಮ ಕುಡಿಯುವ ನೀರು ಯೋಜನೆ ಎರಡು ಕೋಟಿ ರೂ. ಪಾವತಿಸಿದೆ. ಏರುತ್ತಿದೆ ಬಾಕಿ ಭಾರ: ಪ್ರತಿ ತಿಂಗಳು ನೋಟಿಸ್, ವಿದ್ಯುತ್ ಸಂಪರ್ಕ ಕಡಿತದ ಎಚ್ಚರಿಕೆ ನೀಡಿದರೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಇಲಾಖೆ ಬಾಕಿ ಭಾರ ಹೆಚ್ಚಾಗುತ್ತಲೇ ಇದೆ. ಡಿಸೆಂಬರ್ ಅಂತ್ಯಕ್ಕೆ 315 ಕೋಟಿ ರೂ. ಇದ್ದದ್ದು ಫೆಬ್ರವರಿ ಅಂತ್ಯಕ್ಕೆ 338 ಕೋಟಿ ರೂ. ತಲುಪಿದೆ. ಗ್ರಾಪಂಗಳ ಬೀದಿ ದೀಪ, ನೀರು ಪೂರೈಕೆಗೆ ಬಳಸುವ ವಿದ್ಯುತ್ ಬಳಕೆ ಶುಲ್ಕ ಬಾಕಿ ಬೆಳೆಯುತ್ತಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 22 ಕೋಟಿ ರೂ. ಬಿಲ್ ಬಂದರೆ ಇಲಾಖೆಯಿಂದ ಬಿಡುಗಡೆಯಾಗುತ್ತಿರುವುದು 10 ಕೋಟಿ ರೂ. ಮಾತ್ರ. ಹಿಂದಿದ್ದ ಶೇ.25 ಅನುದಾನವನ್ನು ಶೇ.10 ಕ್ಕೆ ಇಳಿಸಿರುವುದು ದೊಡ್ಡ ಮೊತ್ತದ ಬಾಕಿ ಉಳಿಯಲು ಕಾರಣವಾಗಿದೆ.
ಯಾವ ಇಲಾಖೆ ಬಾಕಿ ಎಷ್ಟು? ಕೆಲ ಇಲಾಖೆಗಳು ಇರುವ ಅನುದಾನದಲ್ಲಿ ಒಂದಿಷ್ಟು ಬಾಕಿ ಪಾವತಿಗೆ ಮುಂದಾಗಿವೆ. ಆದರೆ ಅನುದಾನ ಕೊರತೆ ಹಾಗೂ ಹಿಂದಿನ ಬಾಕಿ ಪಾವತಿಗೆ ಸೂಕ್ತ ಅನುದಾನವಿಲ್ಲದ ಕಾರಣ ಕೆಲ ಇಲಾಖೆಗಳ ಬಾಕಿ ಬೆಳೆಯುತ್ತಿದೆ. ಪ್ರಮುಖವಾಗಿ ಹು-ಧಾ ಮಹಾನಗರ ಪಾಲಿಕೆ 52 ಕೋಟಿ ರೂ. ಸೇರಿದಂತೆ ನಗರಾಭಿವೃದ್ಧಿ ಇಲಾಖೆ 119 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ವಿದ್ಯುತ್ ಬಾಕಿ ವಸೂಲಿ ಕ್ರಮಕ್ಕೆ ಕೆಲವರಿಂದ ಅಸಮಾಧಾನ ವ್ಯಕ್ತವಾಗುತ್ತಿದೆಯಾದರೂ ಸರ್ಕಾರಿ ಇಲಾಖೆಗಳು ಮಾಡುವ ತಪ್ಪಿನಿಂದಾಗಿ ಜನಸಾಮಾನ್ಯರ ಮೇಲೆ ವಿದ್ಯುತ್ ದರ ಏರಿಕೆ ಹೊರೆ ಬೀಳುತ್ತಿದೆ ಎನ್ನುವ ಆಕ್ರೋಶವೂ ಇದೆ.
ವಿದ್ಯುತ್ ಬಳಕೆ ಶುಲ್ಕ ಬಾಕಿ ಉಳಿಯುವುದರಿಂದ ಖರೀದಿ ಕಂಪನಿಗಳಿಗೆ ಸಕಾಲದಲ್ಲಿ ಹಣ ಪಾವತಿಸದ ಕಾರಣ ನೂರಾರು ಕೋಟಿ ರೂ. ಬಡ್ಡಿ ನೀಡುವಂತಾಗಿದೆ. ಇದರಿಂದ ಹೆಸ್ಕಾಂ ವತಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕಷ್ಟವಾಗುತ್ತದೆ. ಹೀಗಾಗಿ ಬಾಕಿ ವಸೂಲಿಗೆ ಆದ್ಯತೆ ನೀಡಿ ಪ್ರತಿ ತಿಂಗಳು ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕೆಲ ಇಲಾಖೆಗಳು ಬಾಕಿ ಪಾವತಿಗೆ ಆದ್ಯತೆ ನೀಡಿವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಬಾಕಿ ದೊಡ್ಡ ಪ್ರಮಾಣದಲ್ಲಿದೆ. ಈ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ
. ಡಿ. ಭಾರತಿ, ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ
ಹೇಮರಡ್ಡಿ ಸೈದಾಪುರ