ಬೆಳಗಾವಿ: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಡ ತಂದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಹರ್ತಿಕೋಟಿ ವೀರೇಂದ್ರಸಿಂಹ ಆರೋಪಿಸಿದರು.
ಇಲ್ಲಿಯ ರುಕ್ಮಿಣಿ ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡುವುದಾಗಿ ಹೇಳಿ ಬಾಯಿಗೆ ತುಪ್ಪ ಸವರುವ ಕೆಲಸ ಮಾಡುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಮೀಸಲಾತಿ ನೀಡುವ ಬಗ್ಗೆ ಚಕಾರ ಎತ್ತುವುದಿಲ್ಲ. 76 ದಿನಗಳಿಂದ ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರದಿಂದ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ಹೋರಾಟ ವಾಲ್ಮೀಕಿ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಹಲವು ಉಪ ಜಾತಿಗಳಿವೆ. ಈ ಎಲ್ಲ ಜಾತಿಗಳಿಗೂ ಮೀಸಲಾತಿ ಕಲ್ಪಿಸುವುದಕ್ಕಾಗಿ ಶ್ರೀಗಳು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಸಂವಿಧಾನಾತ್ಮಕವಾಗಿದ್ದು, ಈಗಾಗಲೇ ರಾಜಕೀಯ ಮೀಸಲಾತಿ ಸಿಕ್ಕಿದ್ದು, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಸಿಗಬೇಕಾಗಿದೆ. ಬಿಜೆಪಿ ಸರ್ಕಾರ ಶ್ರೀಗಳಿಗೆ ಸುಳ್ಳು ಆಶ್ವಾಸನೆ ನೀಡಿದ್ದು, ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಶ್ರೀಗಳ 85ನೇ ಹೋರಾಟದ ದಿನದಂದು ಬೆಂಗಳೂರಿನಲ್ಲಿ ಬೃಹತ್ ಎಸ್ಸಿ, ಎಸ್ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗಳ 100ನೇ ದಿನದ ಹೋರಾಟದಂದು ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮಟ್ಟದಲ್ಲಿ ಬೃಹತ್ ಹೋರಾಟ ನಡೆಸಬೇಕು. ಈ ಕುರಿತು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಂಚಾಲಕ ತುಳಸಿರಾಮ ಮಾತನಾಡಿ, ಜಿಲ್ಲಾ ಮಟ್ಟಕ್ಕೆ ತಲುಪಿದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ಹೋರಾಟ ತಾಲೂಕು ಮಟ್ಟಕ್ಕೂ ತಲುಪಬೇಕು. ಅಂದಾಗ ಶ್ರೀಗಳ ಹೋರಾಟಕ್ಕೆ ಅರ್ಥ ಬರುತ್ತದೆ. ನಮ್ಮದೇ ಸಮುದಾಯದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮತಗಳನ್ನು ಪಡೆದರು. ಆದರೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡದೇ ಮೋಸ ಮಾಡಿದರು. ವಾಲ್ಮೀಕಿ ಸಮುದಾಯ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿ ಮತ ಪಡೆದು ಸಮಾಜಕ್ಕೆ ಅನ್ಯಾಯ ಮಾಡಿದರು. ಇಂತಹ ಮನುವಾದಿ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಜಿಲ್ಲಾ ಮಟ್ಟದ ಸಭೆಯನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿದರು.
ರಾಜ್ಯ ಸ್ವಾಭಿಮಾನಿ ಪ.ಜಾತಿ ಮತ್ತು ಪ.ಪಂ ಮೀಸಲಾತಿ ಹೋರಾಟ ಕ್ರಿಯಾ ಸಮಿತಿ ಸಂಚಾಲಕ ಪ್ರತಾಪ್ ಮದಕರಿ, ಮುಖಂಡರಾದ ಸುರೇಶ ಗೌರ್ನರ್, ಬಾಳೇಶ ದಾಸನಟ್ಟಿ, ಚಂದ್ರಕಾಂತ ಪೊಲೀಸಪಾಟೀಲ, ರಾಜಶೇಖರ ತಳವಾರ, ವಿಜಯ ತಳವಾರ, ಮಲಗೌಡ ಪಾಟೀಲ ಸೇರಿದಂತೆ ಸಮಾಜ ಬಾಂಧವರು ಇದ್ದರು.