Advertisement

ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರಕಾರ ಯಶಸ್ವಿ: ಯು.ಟಿ. ಖಾದರ್‌

12:43 PM May 01, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಪ್ರಸ್ತುತ ವರ್ಷ ಈ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ, ವಿದ್ಯುತ್‌, ಗ್ರಾಮೀಣ ಅಭಿವೃದ್ಧಿ ಮತ್ತು ಇತರ ಇಲಾಖೆಗಳ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. 

Advertisement

ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿ ನಿರ್ಮಾಣ ಮತ್ತು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ಸಾಕಷ್ಟು ಅನುದಾನ ಒದಗಣೆ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ, ಗೋಶಾಲೆಗಳಿಗೆ ಮೇವು ಪೂರೈಕೆ ಇತ್ಯಾದಿ ಉಪಕ್ರಮಗಳನ್ನು ಅನುಸರಿಸುವ ಮೂಲಕ ಜನ ಸಾಮಾನ್ಯರಿಗೆ ಕಷ್ಟವಾಗದಂತೆ ನೋಡಿಕೊಳ್ಳಲಾಗಿದೆ ಎಂದವರು ರವಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ವಿದ್ಯುತ್‌ ಸಮಸ್ಯೆ ಆಗಿಲ್ಲ
ವಿದ್ಯುತ್‌ ಸಮಸ್ಯೆ ಇಲ್ಲದ ಕಾರಣ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ಮಾಡಲು ಮತ್ತು ಬರೆಯಲು ಅನನುಕೂಲ ಉಂಟಾಗಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು 100ರಿಂದ 150ಕ್ಕೇರಿಸಲಾಗಿದೆ. ವೇತನವನ್ನು ಹೆಚ್ಚಳ ಮಾಡಲಾಗಿದೆ ಹಾಗೂ ಕೆಲಸ ಮಾಡಿದವರಿಗೆ 15 ದಿನಗಳೊಳಗೆ ವೇತನ ಪಾವತಿಗೆ ಹಣ ಬಿಡುಗಡೆಯಾಗುವಂತೆ ನೋಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮೇವಿನ ಕೊರತೆ ನೀಗಿಸಲು ಗೋಶಾಲೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೇವು ಕೊರತೆ ಬಿದ್ದರೆ ಪಕ್ಕದ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ತರಿಸಲು ಸೂಚಿಸಲಾಗಿದೆ. ಎನ್‌ಆರ್‌ಇಜಿಯಡಿ ಉದ್ಯೋಗಕ್ಕೆ ಹೋಗುವವರ ಮಕ್ಕಳ ಲಾಲನೆ ಮತ್ತು ಪಾಲನೆಗೆ ಹಾಗೂ ಮಧ್ಯಾಹ್ನದ ಬಿಸಿ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ದೇಶದಲ್ಲಿಯೇ ಮಾದರಿ ಕಾರ್ಯಕ್ರಮ ಎಂದರು.

ದಕ್ಷಿಣ ಕನ್ನಡ ಜಿಲ್ಲೆಗೆ ಒದಗಿಸಿದ ಹಣ ವಿನಿಯೋಗ ವಾಗದ ಕುರಿತು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತ ಪಡಿಸಿರುವ ಬಗ್ಗೆ ಪ್ರಸ್ತಾವಿಸಿದಾಗ, ಕೆಲವು ಮಂದಿ ಶಾಸಕರು ಕಾಮಗಾರಿಯ ಪಟ್ಟಿ ಕೊಡಲು ಬಾಕಿ ಇದೆ. ಅಲ್ಲದೆ ಪೂರ್ತಿ ಹಣವನ್ನು ಮೊದಲೇ ಖರ್ಚು ಮಾಡಿದರೆ ಮುಂದಕ್ಕೆ ಹಣದ ಕೊರತೆ ಕಂಡು ಬಂದರೆ ಸಮಸ್ಯೆ ಆಗಬಹುದೆಂದು ಭಾವಿಸಿ ಹಣವನ್ನು ಉಳಿಕೆ ಮಾಡಲಾಗಿದೆ ಎಂದು ಸಚಿವ ಖಾದರ್‌ ವಿವರಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next