ಮಂಗಳೂರು: ಮಂಗಳೂರಿನ ಮೀನುಗಾರಿಕೆ ಬಂದರಿನ ವಿಸ್ತರಣೆಗೆ ಅನುಕೂಲವಾಗುವ ಮೂರನೇ ಹಂತದ ಕಾಮಗಾರಿಯನ್ನು ನೀತಿಸಂಹಿತೆ ಮುಗಿದ ಕೂಡಲೇ ಮರು ಟೆಂಡರ್ ಕರೆದು ಕಾಮಗಾರಿಯನ್ನು ತ್ವರಿತವಾಗಿ ನಡೆಸಬೇಕು ಹಾಗೂ 2ನೇ ಹಂತದ ಬಂದರನ್ನು 37 ಕೋ.ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡುವ ಯೋಜನೆಗೆ ಶೀಘ್ರ ಚಾಲನೆ ನೀಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದರು.
ಮಂಗಳೂರು ಬಂದರಿನಲ್ಲಿ ಎದುರಾಗಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಮೀನುಗಾರಿಕೆ ಸಂಘಟನೆಗಳ ಮುಖಂಡರ ನಿಯೋಗದ ಉಪಸ್ಥಿತಿಯಲ್ಲಿ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಜತೆಗೆ ಸೋಮವಾರ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಿದ ಅವರು ವಿವಿಧ ಸೂಚನೆಗಳನ್ನು ನೀಡಿದರು.
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮಾತನಾಡಿ, ಮೀನುಗಾರಿಕೆ ಬಂದರಿನಲ್ಲಿ ಎದುರಾಗಿರುವ ವಿವಿಧ ಸಮಸ್ಯೆ, ಸವಾಲುಗಳನ್ನು ಬಗೆಹರಿ ಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ನೀತಿಸಂಹಿತೆ ಮುಗಿದ ಬಳಿಕ ಮೀನುಗಾರಿಕೆ, ಬಂದರು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಲಾಗುವುದು. ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸ್ಥಳ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಉಪ ಕಾರ್ಯದರ್ಶಿ ರೆಜು, ಬಂದರು ಇಲಾಖೆ ಕಾರ್ಯದರ್ಶಿ ಮಂಗಳಾ, ಮೀನುಗಾರಿಕಾ ಇಲಾಖಾ ಕಾರ್ಯ ದರ್ಶಿ ಅಜಯ್ ನಾಗಭೂಷಣ್ ಸಹಿತ ಇತರ ಅಧಿಕಾರಿಗಳಿದ್ದರು. ನಿಯೋಗದಲ್ಲಿ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಪರ್ಸೀ ನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ಣ, ಟ್ರಾಲ್ ಬೋಟ್ ಯೂನಿಯನ್ ಉಪಾಧ್ಯಕ್ಷ ಇಬ್ರಾಹಿಂ ಬೆಂಗ್ರೆ, ಕಾರ್ಯದರ್ಶಿ ರಾಜೇಶ್ ಪುತ್ರನ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ಮನೋಹರ್ ಬೋಳೂರು, ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ 1,500ಕ್ಕೂ ಹೆಚ್ಚಿನ ಮೀನುಗಾರಿಕೆ ಬೋಟುಗಳು ಇದ್ದರೂ, ಕನಿಷ್ಠ 500 ಬೋಟುಗಳಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳಿಲ್ಲ. ವಿಸ್ತರಣೆಗೆ 49.50 ಕೋ.ರೂ.ಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಬಂದರಿನ 1 ಮತ್ತು 2 ನೇ ಹಂತದ ಕಾಮಗಾರಿಯನ್ನು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಕೈಗೊಂಡ ಬಗ್ಗೆ ಉಲ್ಲೇಖವಿದ್ದು ಅದನ್ನು ತುರ್ತಾಗಿ ನಡೆಸಬೇಕು. ಡ್ರೆಜ್ಜಿಂಗ್ ಸಮಸ್ಯೆಯನ್ನು ಪರಿಹರಿಸಬೇಕು. ಬಂದರಿನಾದ್ಯಂತ ಸೂಕ್ತ ಸಿ.ಸಿ.ಟಿ.ವಿ. ವ್ಯವಸ್ಥೆ ಹಾಗೂ ನಿರಂತರ ಆರಕ್ಷಕ ಸಿಬಂದಿ ನಿಯೋಜಿಸಬೇಕು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಮೀನುಗಾರ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.