ಮಡಂತ್ಯಾರು : ಕುಕ್ಕಳದಲ್ಲಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಶುಕ್ರವಾರ ಜರಗಿದ ಮಡಂತ್ಯಾರು ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಒತ್ತಾಯಿಸಲಾಯಿತು.
ಕುಕ್ಕಳದಲ್ಲಿ ಕೃಷ್ಣಪ್ಪ ಬಂಗೇರ ಎಂಬವವರು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಣೇಶ್ ಆರೋಪಿಸಿದರು.
ಕುಕ್ಕಳದಲ್ಲಿ 80 ಸೆಂಟ್ಸ್ ಪಟ್ಟ ಜಾಗ ಹೊಂದಿದ ವ್ಯಕ್ತಿ 20 ಎಕರೆ ಕುಮ್ಕಿಜಾಗವನ್ನು ಅತಿಕ್ರಮಿಸಿದ್ದು ಸಾರ್ವಜನಿಕರಿಗೆ ರಸ್ತೆ ನಿರ್ಮಾಣಕ್ಕೂ ಜಾಗಬಿಡುತ್ತಿಲ್ಲ. ಕುಮ್ಕಿಜಾಗಕ್ಕೆ ಅರ್ಜಿ ಸಲ್ಲಿಸಿದವರಿಗೂ ಜಾಗ ನೀಡಿಲ್ಲ. ಸೂಕ್ತ ತನಿಖೆ ಮಾಡಿ ಕುಮ್ಕಿ ಜಾಗ ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಡಿ.ಸಿ.ಮನ್ನಾ ಜಾಗ ಅರಣ್ಯ ಇಲಾಖೆಗೆ ಪಾರೆಂಕಿ ಗ್ರಾಮದ ಸರ್ವೆ ನಂ.102ರಲ್ಲಿ 8 ಎಕರೆ, 38 ಸೆಂಟ್ಸ್ ಡಿಸಿ ಮನ್ನ ಜಾಗ ಇದೆ. ಡಿಸಿ ಮನ್ನಾ ಜಾಗದಲ್ಲಿ ದರ್ಖಾಸು ಆಗಿ 6 ಸೆಂಟ್ಸ್ ಮಾತ್ರ ಬಾಕಿ ಉಳಿದಿದೆ. ಅತಿಕ್ರಮಣ ಆಗಿದೆ. ಅದು ಯಾರ ಬಳಿ ಇದೆ ಎನ್ನುವ ಮಾಹಿತಿ ಇಲ್ಲ. ರಕ್ತೇಶ್ವರಿ ಪದವಿನಲ್ಲಿ ಸಾಮಾಜಿಕ ಅರಣ್ಯ ಎಂದು ಅರಣ್ಯ ಇಲಾಖೆಗೆ ಹೋಗಿದೆ. ಡಿಸಿ ಮನ್ನಾ ಜಾಗ ಅರಣ್ಯಕ್ಕೆ ಹೋಗುತ್ತದೆಯೇ ಎಂದು ಫ್ರಾನ್ಸಿಸ್ ವಿ.ವಿ. ಪ್ರಶ್ನಿಸಿದರು. ಡಿಸಿ ಮನ್ನ ಜಾಗ ಆರ್‌ಟಿಸಿಯಲ್ಲಿ ಅರಣ್ಯ ಇಲಾಖೆಗೆ ಹೋಗುವುದಾದರೆ ನಮ್ಮ ಆರ್‌ಟಿಸಿಗೆ ಬರೆದುಕೊಡಲು ಸಾಧ್ಯವೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಅವಕಾಶ ಇಲ್ಲ.ಕಂದಾಯಇಲಾಖೆ ಗ್ರಾ.ಪಂ.ಗೆ ಯಾವುದೇ ಮಾಹಿತಿ ನೀಡದೆ ಕೆಲಸ ಮಾಡುತ್ತಿದೆ ಅದಕ್ಕಾಗಿ ತಹಶಿಲ್ದಾರರಿಗೆ ದೂರು ಕೊಟ್ಟಿದ್ದೇವೆ ಎಂದರು.
ಪಾರೆಂಕಿ ಗ್ರಾಮದಲ್ಲಿ ಗೋಮಾಳ ಜಾಗ ಎಷ್ಟಿದೆ ನಿಮ್ಮ ಇಲಾಖೆಯಲ್ಲಿ ಒಬ್ಬೊಬ್ಬರಿಗೆ ಒಂದು ಕಾನೂನು ಇದೆಯೆ ಎಂದು ಪ್ರಶ್ನಿಸಿದರು. ಗ್ರಾಮ ಸಭೆಗೆ ಬಂದು ಬರೆದುಕೊಂಡು ಹೋಗುತ್ತೀರಿ. ಉತ್ತರ ಕೊಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಗೋಮಾಳದಲ್ಲಿ 94ಸಿ ಜಾಗ ನೀಡುವ ಅವಕಾಶ ಇಲ್ಲ ಎಂದಾದರೆ ಅದನ್ನು ಅಳತೆ ಮಾಡಿ ಪಶುಸಂಗೋಪನೆಗೆ ನೀಡಿ ಎಂದು ರಿಚರ್ಡ್ ಹೇಳಿದರು. ವಾರ್ಡ್ 1,2,3ರಲ್ಲಿ ತೆರೆದ ಬಾವಿ ರಚನೆ ಆಗಬೇಕು ಎಂದವರು ಒತ್ತಾಯಿಸಿದರು.
ಮನೆ ಹಂಚಿಕೆ
ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಹಲವು ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಿದ್ದೇವೆ. ಹೆಚ್ಚಿನವರು ಪ್ರಯೋಜನ ಪಡೆಯುತ್ತಿಲ್ಲ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ಸಭೆಯಲ್ಲಿ ಮನೆ ಹಂಚಿಕೆಯ ನಿರ್ಣಯ ನಡೆಯಲಿದೆ. ಮನೆ ಬೇಕಾದ ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಮಹಾವೀರ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.