Advertisement

ನಿರ್ವಹಣೆಯಿಲ್ಲದೇ ಬಳಲುತ್ತಿವೆ ಸರ್ಕಾರಿ ಶಾಲೆಗಳು!

03:33 PM Dec 17, 2018 | |

ಶಿರಸಿ: ಒಂದು ಕಾಲಕ್ಕೆ ವಿದ್ಯಾರ್ಜನೆ ಕೇಂದ್ರವಾಗಿದ್ದ ಸರಕಾರಿ ಶಾಲೆಗಳಿಗೆ ಮಕ್ಕಳೇ ಇಲ್ಲದೇ ಇದೀಗ ಅನಾಥವಾಗಿದ್ದು, ನಿರ್ವಹಣೆ ಕೂಡ ಇಲ್ಲದೇ ಬಳಲುವ ಸಂಗತಿ ಶಿಕ್ಷಣಾಭಿಮಾನಿಗಳ ನೋವಿಗೆ ಕಾರಣವಾಗಿದೆ. ಒಂದರಿಂದ ನಾಲ್ಕು ತರಗತಿ ನಡೆಸುತ್ತಿದ್ದ ಗ್ರಾಮೀಣ ಭಾಗದ ಕೆಲ ಕಿರಿಯ ಪ್ರಾಥಮಿಕ ಶಾಲೆಗಳು, ಒಂದೆರಡು ಹಿರಿಯ ಪ್ರಾಥಮಿಕ ಶಾಲೆಗಳೂ ಮಕ್ಕಳ ಕೊರತೆ ಎದುರಿಸಿ ಬಾಗಿಲು ಹಾಕಿದ್ದವು. ಅಲ್ಲಿದ್ದ ಬೆಂಚ್‌, ಖುರ್ಚಿ, ದಾಖಲೆ, ಕಂಪ್ಯೂಟರ್‌ಗಳು ಸಮೀಪದ ಕೇಂದ್ರ ಶಾಲೆಗೆ ವರ್ಗಾವಣೆಗೊಂಡಿದ್ದವು.

Advertisement

ಆದರೆ, ಕಟ್ಟಡ? ಅದರ ನಿರ್ವಹಣೆ ಮಾತ್ರ ಯಾರಿಗೂ ಸಂಬಂಧವೇ ಇಲ್ಲದಂತಾಗಿದೆ. ಶೌಚಾಲಯಗಳು ಹಾಳಾಗುತ್ತಿವೆ. ನೀರಿನ ಟಾಕಿ, ಕರೆಂಟ್‌, ಎಲ್ಲವೂ ಅನಾಥವಾಗಿವೆ. ತಿಂಗಳಿಗೆ ಬಿಡಿ, ವರ್ಷಕ್ಕೊಮ್ಮೆ ಕೂಡ ಬಾಗಿಲು ತೆರೆಯುವವರು ಇಲ್ಲವಾಗಿದೆ. ಪಂಚಾಯ್ತಿಯಲ್ಲಿ ಬೀಗದ ಚಾವಿ ಇದ್ದರೂ ಅವರಿಗೂ ಅದರ ಬಳಕೆ ಹೇಗೆ ಎಂಬ ಆಸಕ್ತಿ ಇಲ್ಲದೇ ಬಿಕೋ ಎನ್ನುತ್ತಿವೆ.

ಸೋತ ಶಾಲೆಗಳು: ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕೃಷಿ ಬಿಟ್ಟು ನಗರಕ್ಕೆ ಉದ್ಯೋಗಕ್ಕೆ ವಲಸೆ ಹೋಗಿದ್ದು, ಯುವಕರಿಗೆ ವಿವಾಹವಾಗದೇ ಇರುವದು, ಇರುವ ತಂದೆ ತಾಯಿಗಳಿಗೂ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಇರುವ ಮಕ್ಕಳಿಗೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಕೂಡ ಇರುವ ಒಂದೆರಡು ಮಕ್ಕಳೂ ಪೇಟೆ ಸೇರಿದ್ದಾರೆ.

ಸರಕಾರಿ ಶಾಲಾ ಶಿಕ್ಷಕರಿಗೂ ಹೊರಗಿನ ಕೆಲಸದ ಹೊರೆಯೇ ಅ ಧಿಕ ಇದೆ. ಅವರನ್ನು ಶಾಲೆಯಲ್ಲೇ ಇಟ್ಟರೆ ಮಾತ್ರ ಅವರಿಗೆ ಶಿಕ್ಷಣದಲ್ಲಿ ಲಕ್ಷ್ಯ ಹಾಕಲು ಸಾಧ್ಯ. ಅದಾವುದೂ ಆಗಿಲ್ಲ. ಈ ಕಾರಣದಿಂದ ಸರಕಾರಿ ಗ್ರಾಮೀಣ ಶಾಲೆಗಳು ಸೋಲಲು ಕಾರಣವಾಗಿದೆ ಎನ್ನುತ್ತಾರೆ ಕೆಲ ಪಾಲಕರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 16 ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ಅದರಲ್ಲೂ ಸಂಪೂರ್ಣ ಬಂದ್‌ ಆಗುವ ಹಂತದಲ್ಲಿ ಆರು ಶಾಲೆಗಳಿವೆ. ಜ್ಞಾನಾರ್ಜನೆ ಮಾಡುವ ಕೊಠಡಿಗಳು ಅನಾಥವಾಗಿವೆ. ಆಟವಾಡುವ ಅಂಗಳಗಳು ಹುಲ್ಲುಗಿಡಗಳಿಂದ ಆವರಿಸಿವೆ.

Advertisement

ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೂಕಾರ, ಕಾನ್ಮನೆ, ಹಂಜಕ್ಕಿ, ಕಲಗಾರ, ಮತ್ತೀಹಳ್ಳಿ, ಹಂಚಳ್ಳಿ, ಶಿರಸಿ ತಾಲೂಕಿನ ಬೆಟ್ಟಕೊಪ್ಪ, ಮಾವಿನಕೊಪ್ಪ, ಹಳಿಯಾಳದ ಮಂಗಳವಾಡ, ಬಂಗೂರನಗರ, ಜೊಯಿಡಾದ ಬೋರಿ, ಕರಿಯಾರಿ, ಯಲ್ಲಾಪುರದಲ್ಲಿ 2 ಶಾಲೆಗಳು ಬಾಗಿಲು ಎಳೆದುಕೊಂಡಿವೆ. ಆದರೆ ಜೊಯಿಡಾದಲ್ಲಿ 2 ಮತ್ತು ಹಳಿಯಾಳದಲ್ಲಿ 1 ಶಾಲೆಗಳು ಹೊಸದಾಗಿ ಆರಂಭಗೊಂಡಿವೆ ಎಂಬುದು ವಿಶೇಷ. ಹಳಿಯಾಳದ ಮಂಗಳವಾಡ, ಬಂಗೂರನಗರ ಮರಾಠಿ ಶಾಲೆಗಳು ಸಂಪೂರ್ಣ ಬಂದ್‌ ಆಗಿವೆ.

ಶಾಲೆಗಳು ಅನಾಥವಾಗದಂತೆ ನೋಡಿಕೊಳ್ಳುವ ಹಾಗೂ ಅವುಗಳನ್ನು ನಿರ್ವಹಿಸುವ ಹೊಣೆ ಯಾರದ್ದು ಎಂಬುದನ್ನು ನಿಗದಿಗೊಳಿಸಬೇಕಾಗಿದೆ. ಬಾಗಿಲು ಹಾಕಿದ ಶಾಲೆಗಳಲ್ಲಿ ಗ್ರಾಪಂ ಗ್ರಂಥಾಲಯ ಅಥವಾ ಅಂಗನವಾಡಿ ನಡೆಸಲು ಅವಕಾಶ ಇದೆ.
ಸಿ.ಎಸ್‌. ನಾಯ್ಕ, ಉಪ ನಿರ್ದೇಶಕ
ಶಿರಸಿ ಶೈಕ್ಷಣಿಕ ಜಿಲ್ಲೆ

ಆಯಾ ಗ್ರಾಮಗಳಿಗೇ ಆಯಾ ಶಾಲಾ ಉಸ್ತುವಾರಿ ನೀಡಬೇಕು. ಅವರು ಯುವಕ ಸಂಘಗಳ ಚಟುವಟಿಕೆ ಅಥವಾ ಸ್ವ ಸಹಾಯ ಸಂಘಗಳ ಸಭೆಗಳಿಗೂ ಬಳಸಿಕೊಳ್ಳಲು ಅನುಮತಿ ನೀಡುವಂತಾಗಬೇಕು.
 ಕೆ.ಕೆ.ಹೆಗಡೆ, ಪಾಲಕ

„ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next