Advertisement

ರಾಜ್ಯಾದ್ಯಂತ “ಸರಕಾರಿ ಶಾಲೆ ಉಳಿಸಿ’ಅಭಿಯಾನ

10:25 AM Jul 24, 2018 | Harsha Rao |

ಬೆಳ್ತಂಗಡಿ: ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಬಂಟ್ವಾಳದ ಕರೆಂಕಿಯ ಶ್ರೀ ದುರ್ಗಾ ಫ್ರೆಂಡ್ಸ್‌ ರಾಜ್ಯದ 1,000 ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳಿಗೆ ವರದಿ ಒಪ್ಪಿಸುವ “ಸರಕಾರಿ ಶಾಲೆ ಉಳಿಸಿ’ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ.

Advertisement

ಸರಕಾರಿ ಶಾಲೆಗಳ ಭೇಟಿ ಅಭಿಯಾನವನ್ನು ಸೋಮವಾರ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಿಸಿ ಬಳಿಕ
ಶ್ರೀ ದುರ್ಗಾ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಸ್ತುತ ಹೆತ್ತವರು ಆಂಗ್ಲ ಶಿಕ್ಷಣದ ವ್ಯಮೋಹದಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳು ಹಿಸುತ್ತಿದ್ದಾರೆ. ಇದನ್ನು ತಪ್ಪಿಸ ಬೇಕಾದರೆ ಸರಕಾರಿ ಶಾಲೆಗಳಲ್ಲೂ ಆಂಗ್ಲ ಶಿಕ್ಷಣದ ಅಗತ್ಯವಿದ್ದು, 5ನೇ ತರಗತಿಯ ಬದಲು ಒಂದರಿಂದಲೇ ಆಂಗ್ಲ ಶಿಕ್ಷಣ ಆರಂಭಗೊಳ್ಳಬೇಕು ಎಂದರು.

2.20 ಕೋ.ರೂ. ಕಟ್ಟಡ
ಸಂಘಟನೆಯು ಈಗಾಗಲೇ ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಿದ್ದು , ಈ ಸಾಲಿನಲ್ಲಿ ಮಕ್ಕಳ ಸಂಖ್ಯೆ 500 ದಾಟಿದೆ. ಸರಕಾರದ ಅನುದಾನ ಪಡೆಯದೆ 2.20 ಕೋ.ರೂ. ವೆಚ್ಚದಲ್ಲಿ ಶಾಲೆಗೆ ಸುಂದರ ಕಟ್ಟಡ ನಿರ್ಮಿಸಲಾಗಿದೆ. ದೂರದ ಮಕ್ಕಳು ಶಾಲೆಗೆ ಬರಲು ಶಾಲಾ ವಾಹನವನ್ನೂ ಒದಗಿಸಲಾಗಿದೆ.

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭ ಹಾಗೂ ಶಾಲೆಗಳ ವಿಲೀನದ ವಿಚಾರವನ್ನು  ಪ್ರಸ್ತಾವಿಸಿದಾಗ ಸಾಹಿತಿಗಳು ವಿರೋಧಿಸಿದ್ದರು. ಆದರೆ ಅವರ ಮನೆಯ ಮಕ್ಕಳು ಖಾಸಗಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ದಡ್ಡಲಕಾಡು ಸರಕಾರಿ ಶಾಲೆಯಂತೆ ರಾಜ್ಯದ ಇತರ ಶಾಲೆಗಳನ್ನೂ ಉಳಿಸುವ ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಪ್ರಕಾಶ್‌ ಅಂಚನ್‌ ತಿಳಿಸಿದರು. 

ಸೆ. 8: ಕಾಲ್ನಡಿಗೆ ಜಾಥಾ
ರಾಜ್ಯದ ಸರಕಾರಿ ಶಾಲೆಗಳ ಅಭಿ ವೃದ್ಧಿಯ ವರದಿಯೊಂದನ್ನು ಸಿದ್ಧಪಡಿಸಿ, ಸೆ. 8ರಂದು ಬೆಂಗಳೂರಿನಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಕಾಲ್ನಡಿಗೆ ಜಾಥಾ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಯಾಗಿ ಬೇಡಿಕೆ ಮಂಡಿಸಲಿದ್ದೇವೆ. ಜನರನ್ನು ಸೇರಿಸುವ ನಿಟ್ಟಿನಲ್ಲಿ ಮಿಸ್ಡ್ ಕಾಲ್‌ (7676444225) ಅಭಿಯಾನ ಆರಂಭಿಸಿದ್ದು, ಈಗಾಗಲೇ 45 ಸಾವಿ ರಕ್ಕೂ ಅಧಿಕ ಕರೆಗಳು ಬಂದಿವೆ ಎಂದರು.

Advertisement

ಶಾಸಕ ಹರೀಶ್‌ ಪೂಂಜಾ ಅವರನ್ನು ಭೇಟಿಯಾಗಿ ಸಹಕಾರ ಯಾಚಿಸಿದ್ದೇವೆ. ಕಡಿಮೆ ಮತ್ತು ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಭೇಟಿ ನೀಡಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಡ್ಡಲಕಾಡು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಶಿಕ್ಷಣ ಪ್ರೇಮಿಗಳಾದ ಸಂತೋಷ್‌, ಗಂಗಾಧರ ಪೂಜಾರಿ, ದೇವದಾಸ್‌ ಸಾಲ್ಯಾನ್‌, ಸಂದೀಪ್‌ ಸಾಲ್ಯಾನ್‌, ದೀಪಕ್‌ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next