Advertisement

ಬೇಳೆಕಾಳು ರಫ್ತು ಮೇಲಿನ ನಿರ್ಬಂಧ ತೆರವು

06:00 AM Nov 17, 2017 | Team Udayavani |

ನವದೆಹಲಿ: ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾಗಿದ್ದ ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿಯೊಂದು ಬಂದಿದೆ. ಎಲ್ಲ ರೀತಿಯ ಬೇಳೆಕಾಳುಗಳ (ದ್ವಿದಳ ಧಾನ್ಯ) ರಫ್ತು ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ವಾಪಸ್‌ ಪಡೆದು ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಈ ನಿರ್ಧಾರಕ್ಕೆ ಬಂದಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, “ಬೇಳೆ ಕಾಳುಗಳ ರಫ್ತಿನ ಮೇಲೆ ಇದ್ದ ನಿರ್ಬಂಧವನ್ನು ತೆರವು ಮಾಡಿದ್ದೇವೆ. ಪರಿಣಾಮ ರಫ್ತಿಗೆ ಮುಕ್ತ ಅವಕಾಶ ಇರುವ ಕಾರಣ ರೈತರು ತಮ್ಮ ಬೆಳೆಗಳಿಗೆ ಉತ್ತಮ ಆದಾಯ ಪಡೆಯಬಹುದು ಮತ್ತು ಬಿತ್ತನೆ ಪ್ರದೇಶವನ್ನೂ ವಿಸ್ತರಿಸಿಕೊಳ್ಳಬಹುದಾಗಿದೆ,’ ಎಂದಿದ್ದಾರೆ.

ಜತೆಗೆ, ಬೇಳೆಕಾಳುಗಳ ರಫ್ತಿಗೆ ಅನುಮತಿ ನೀಡುವುದರಿಂದ ಹೆಚ್ಚುವರಿ ಉತ್ಪನ್ನಗಳಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅಲ್ಲದೆ, ದೇಶದ ರಫ್ತುದಾರರು ಮತ್ತೆ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲೂ ನೆರವಾಗುತ್ತದೆ ಎಂದಿದ್ದಾರೆ ಸಚಿವ ಪ್ರಸಾದ್‌. ಇದೇ ವೇಳೆ, ಬೇಳುಕಾಳುಗಳ ಮೇಲಿನ ರಫ್ತು ಮತ್ತು ಆಮದು ನೀತಿಯನ್ನು ಮರುಪರಿಶೀಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ(ಸಿಸಿಇಎ) ಅಧಿಕಾರ ಕಲ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next