ಮೈಸೂರು: ಸರ್ಕಾರ ರೈತರಿಗೆ ರೂಪಿಸಿರುವ ಯೋಜನೆಗಳು ಅಧಿಕಾರಿಗಳು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಬೇಕು ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಹೇಳಿದರು. ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಮೈಸೂರು ಜಿಲ್ಲಾ, ಗರ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಲಾಕ್‌ಡೌನ್ ಸಂದರ್ಭದಲ್ಲಿ ತೊಂದ ರೆಗೆ ಒಳಗಾದ ರೈತರಿಗೆ ಸರ್ಕಾರದಿಂದ ದೊರಕುವ ಪರಿಹಾರವನ್ನು ಪ್ರಮಾಣಿಕವಾಗಿ ತಲುಪಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬ ಬೇಕಿದೆ. ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು. ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಬೇಕು ಎಂದು ಸೂಚಿಸಿದರು.
ಕಸ ಬೇರ್ಪಡಿಸಿ: ತಾಲೂಕುಗಳಲ್ಲಿ ಸಂಗ್ರಹ ಮಾಡುತ್ತಿರುವ ತ್ಯಾಜ್ಯಗಳನ್ನು ಒಣ ಹಾಗೂ ಹಸಿ ಕಸವನ್ನಾಗಿ ಬೇರ್ಪಡಿಸುವಂತೆ ಕಟ್ಟುನಿಟ್ಟಿನ ಯೋಜನೆ ರೂಪಿಸಿಬೇಕು. ಇದರಿಂದ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ರೇಷ್ಮೆ ಬೆಳೆಯಲು ಪ್ರೋತ್ಸಾಹಿಸಿ: ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲು ಸೂಕ್ತ ವಾತಾವರಣವಿದ್ದು ರೇಷ್ಮೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕಿದೆ ಎಂದು ಸಲಹೆ ನೀಡಿದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಹುಣಸೂರು ಭಾಗದಲ್ಲಿ ತಂಬಾಕು ಬೆಳೆಗೆ ಸಿಂಪಡಿಸುವ ಔಷಧದಿಂದ ರೇಷ್ಮೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಜ್ಞಾನಿಗಳನ್ನು ಕಳುಹಿಸಿ ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಮಂಜುನಾಥ್, ಹರ್ಷವರ್ಧನ, ನಾಗೇಂದ್ರ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಧರ್ಮಸೇನ, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಯೋಜನಾಧಿಕಾರಿ ಲೋಕನಾಥ್, ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್ ಇತರರಿದ್ದರು.