ಭೋಪಾಲ್: ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಅಂಚೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸುರೇಂದ್ರ ಕುಮಾರ್ ದೀಕ್ಷಿತ್ ಮೃತ ವ್ಯಕ್ತಿ.
ಅಂಚೆ ಇಲಾಖೆಯು 34ನೇ ಅಖಿಲ ಭಾರತ ಅಂಚೆ ಹಾಕಿ ಪಂದ್ಯಾವಳಿಯನ್ನು ಭೋಪಾಲ್‌ನ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಇದರ ಅಂಗವಾಗಿ ಅಂಚೆ ಇಲಾಖೆಯ ಕಚೇರಿ ಆವರಣದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ನೃತ್ಯ ಮಾಡುತ್ತಿರುವಾಗ ಸುರೇಂದ್ರ ಕುಮಾರ್ ದೀಕ್ಷಿತ್ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೆಲವೊಂದು ವರದಿಗಳ ಪ್ರಕಾರ ‘ಬಾಸ್ ಆಜ್ ಕಿ ರಾತ್ ಹೈ ಜಿಂದಗಿ, ಕಲ್ ಹಮ್ ಕಹಾನ್, ತುಮ್ ಕಹಾನ್ʼ ಹಾಡು ಪ್ರಸಾರವಾಗುತ್ತಿತ್ತು ಇದೇ ವೇಳೆ ಕುಸಿದು ಬಿದ್ದಿದ್ದಾರೆ. ಹೃದಯ ಸ್ತಂಭನವಾಗಿ (ಕಾರ್ಡಿಯಾಕ್ ಅರೆಸ್ಟ್ ) ಅವರು ಕುಸಿದು ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.
ಮಾರ್ಚ್ 16 ರಂದು ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗುತ್ತಿದೆ.