Advertisement

ನಗರದಲ್ಲಿ ಗಿಡ ನೆಡಲು ಆಸಕ್ತಿ ತೋರದ ಸರಕಾರ !

05:43 PM Dec 18, 2021 | Team Udayavani |

ಮಹಾನಗರ: ಪರಿಸರದ ಹಸುರೀಕರಣಕ್ಕೆ ಒತ್ತು ನೀಡುತ್ತೇವೆ ಎಂಬ ರಾಜ್ಯ ಸರಕಾರವು ನಗರ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸಲು ಅರಣ್ಯ ಇಲಾಖೆಗೆ ಇನ್ನೂ ನಿಗದಿತ ಗುರಿ ನೀಡಿಲ್ಲ.

Advertisement

ನಗರದಲ್ಲಿ ಎಷ್ಟು ಕಿ.ಮೀ.ವರೆಗೆ, ಎಷ್ಟು ಗಿಡ ನೆಡಬೇಕು ಎಂಬ ಗುರಿಯನ್ನು ಅರಣ್ಯ ಇಲಾಖೆಗೆ ರಾಜ್ಯ ಸರಕಾರ ಪ್ರತೀ ವರ್ಷ ನೀಡಬೇಕು. ಅದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಗಿಡ ಬೆಳೆಸಲಾಗುತ್ತದೆ. ನಿರ್ವಹಣೆಗೆಂದು ಹಂತ ಹಂತವಾಗಿ ಅನುದಾನ ಕೂಡ ಬಿಡುಗಡೆಯಾಗುತ್ತದೆ. ಆದರೆ, ಕೊರೊನಾ ನೆಪವೊಡ್ಡಿ ಕಳೆದ ಎರಡು ವರ್ಷ ಜಿಲ್ಲೆಗೆ ಯಾವುದೇ ಗುರಿ ನಿಗದಿಪಡಿಸಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲು ಸಾಧ್ಯವಾಗಿಲ್ಲ. ಸರಕಾರದ ಈ ನೀತಿಯಿಂದಾಗಿ ಜಿಲ್ಲೆಯ ಹಸುರೀಕಣಕ್ಕೆ ಧಕ್ಕೆ ಉಂಟಾಗಿದೆ.
ಮಂಗಳೂರು ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ರತೀ ವರ್ಷ ಸುಮಾರು 5ರಿಂದ 6 ಕಿ.ಮೀ. ವ್ಯಾಪ್ತಿ ರಸ್ತೆ ಬದಿಗಳಲ್ಲಿ, ಡಿವೈಡರ್‌ಗಳಲ್ಲಿ ಗಿಡ ನೆಡಲಾಗುತ್ತದೆ. ಕೆಲವು ಗಿಡಗಳನ್ನು ಪ್ರೋತ್ಸಾಹ ಧನದೊಂದಿಗೆ ಸಾರ್ವಜನಿಕರಿಗೆ, ಸಂಘ – ಸಂಸ್ಥೆಗಳಿಗೆ ವಿತರಿಸಲಾಗುತ್ತದೆ.

ನಗರ ಕೇಂದ್ರೀಕೃತವಾಗಿ ಈ ಹಿಂದೆ ನಡೆಸಿದ ಸಂಶೋಧನೆ ಯೊಂದರ ಪ್ರಕಾರ ಮಂಗಳೂರಿನ ಬಂದರು, ಕುದ್ರೋಳಿ ವಾರ್ಡ್‌ಗಳಲ್ಲಿ ಅತೀ ಕಡಿಮೆ ಹಸುರು ಪ್ರದೇಶ ಇದೆ ಎಂಬ ಅಂಶ ಕಂಡುಬಂದಿದೆ. ಅಭಿವೃದ್ಧಿ ಉದ್ದೇಶಕ್ಕೆ ನಗರದಲ್ಲಿ ಹಸುರು ಮಾಯವಾಗುತ್ತಿದ್ದು, ಮತ್ತೆ ಗಿಡ ನೆಟ್ಟು ಸಮತೋಲನ ಕಾಯ್ದುಕೊಳ್ಳಬೇಕಿದೆ. ಪ್ರೋತ್ಸಾಹ ನೀಡಬೇಕಾದ ರಾಜ್ಯ ಸರಕಾರವು ಇದೀಗ ಅನುದಾನ ಮತ್ತು ಗಿಡ ನೆಡಲು ಗುರಿ ನೀಡದ ಪರಿಣಾಮ ಅರಣ್ಯ ಇಲಾಖೆಯು ಸಿ.ಎಸ್‌.ಆರ್‌. ಅನುದಾನ ನಂಬಿ ಕೂತಿದೆ. ನಗರ ವ್ಯಾಪ್ತಿಯಲ್ಲಿರುವ ಕೆಲವೊಂದು ಕೈಗಾರಿಕೆ ಸಂಸ್ಥೆಗಳ ಸಹಯೋಗದೊಂದಿಗೆ ಸಿಎಸ್‌ಆರ್‌ ಅನುದಾನ ಕ್ರೋಡೀಕರಿಸಿ ನಗರದಲ್ಲಿ ಗಿಡ ನೆಡಲು ಇಲಾಖೆ ಮುಂದಾಗಿದೆ.

ವಲಯ ವ್ಯಾಪ್ತಿಗೂ ಸಿಗದ ಗುರಿ
ನಗರ ಹೊರತುಪಡಿಸಿ, ಜಿಲ್ಲಾ ವ್ಯಾಪ್ತಿಯ ಇತರ ವಲಯಗಳಿಗೂ ಇನ್ನೂ ನಿಗದಿತ ಗುರಿಯನ್ನು ರಾಜ್ಯ ಸರಕಾರ ನೀಡಲಿಲ್ಲ. ದ.ಕ. ಜಿಲ್ಲಾ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಪಂಜ, ಸುಳ್ಯ, ಸುಬ್ರಹ್ಮಣ್ಯ ವಲಯಗಳಿವೆ. ಈ ವ್ಯಾಪ್ತಿಯಲ್ಲಿ ರಾಮಪತ್ರೆ, ಉಂಡೆಹುಳಿ, ದಾಲಿcನಿ, ಹಲಸು, ಹೆಬ್ಬಲಸು ಸಹಿತ ಇತರ ಹಣ್ಣಿನ ಗಿಡಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ಹೆಚ್ಚಿನ ಹಣ್ಣಿನ ಗಿಡಗಳನ್ನು ನೆಡಲಾಗುತ್ತದೆ. ಆದರೆ, ಸದ್ಯ ಈ ಎಲ್ಲ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ.

ಗುರಿ ಸಿಕ್ಕಿಲ್ಲ
ನಗರ ವ್ಯಾಪ್ತಿಯಲ್ಲಿ ಸಹಿತ ಜಿಲ್ಲೆಯಲ್ಲಿ ಗಿಡ ನೆಡುವುದಕ್ಕೆ ರಾಜ್ಯ ಸರಕಾರದಿಂದ ಇನ್ನೂ, ಯಾವುದೇ ರೀತಿಯ ಗುರಿ ಸಿಕ್ಕಿಲ್ಲ. ಕೊರೊನಾ ಕಾರಣ ದಿಂದ ಕಳೆದ ವರ್ಷವೂ ಟಾರ್ಗೆಟ್‌ ನೀಡಿರ ಲಿಲ್ಲ. ಇದೇ ಕಾರಣಕ್ಕೆ, ಸದ್ಯ ಗಿಡ ನೆಡಲು ಅನು ದಾನದ ಕೊರತೆ ಇದೆ. ಸಿ.ಎಸ್‌.ಆರ್‌. ಅನುದಾನ ಬಳಸಿಕೊಂಡು ಗಿಡ ನೆಡಲು ಆದ್ಯತೆ ನೀಡುತ್ತೇವೆ.
 -ಡಾ| ದಿನೇಶ್‌ ಕುಮಾರ್‌,
ಉಪ ಸಂರಕ್ಷಣಾಧಿಕಾರಿ ದ.ಕ. ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next