Advertisement

ಸರಕಾರಿ ಭೂಮಿ ಸಂರಕ್ಷಣೆ ಅಗತ್ಯ: ಡಾ|ಪ್ರಸಾದ್‌

03:15 AM Jul 08, 2017 | |

ಮಡಿಕೇರಿ: ಜಿಲ್ಲೆಯಲ್ಲಿರುವ ಸರಕಾರಿ ಭೂಮಿಯನ್ನು ಸಂರಕ್ಷಣೆ ಮಾಡುವತ್ತ ವಿಶೇಷ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಎನ್‌.ವಿ. ಪ್ರಸಾದ್‌ ಅವರು ನಿರ್ದೇಶನ ನೀಡಿದ್ದಾರೆ. 
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಮೀನುಗಳ ನ್ಯಾಯಾಲಯ ಪ್ರಕರಣಗಳು ಮತ್ತು ಸರಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
  
ಸರಕಾರಿ ಭೂಮಿಯನ್ನು ಸಂರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂಗನವಾಡಿ, ಶಾಲೆ, ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಕಚೇರಿ ಹೀಗೆ ಸರಕಾರಿ ಕಾರ್ಯಗಳಿಗೆ ಭೂಮಿ ಸಿಗುವುದಿಲ್ಲ. ಭೂಮಿ ಕೊಡಲು ಸಹ ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಸರಕಾರಿ ಭೂಮಿ ಸಂರಕ್ಷಣೆ ಮಾಡಿಕೊಳ್ಳುವುದು ಸರಕಾರದ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಡಾ| ಎನ್‌.ವಿ. ಪ್ರಸಾದ್‌ ಹೇಳಿದರು.
  
ಸರಕಾರಿ ಭೂಮಿ ಒತ್ತುವರಿ ಸಂಬಂಧಿಸಿದಂತೆ ಪರಿಶೀಲಿಸಿ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಬೇಕು. ಸರಕಾರಿ ಭೂಮಿಗೆ ಬೇಲಿ ಹಾಕುವ ಕೆಲಸ ಮಾಡಬೇಕು. ಇದಕ್ಕಾಗಿ ಸರಕಾರ ಹಣ ಬಿಡುಗಡೆ ಮಾಡಲಿದೆ ಎಂದು ಸಾರ್ವಜನಿಕ ಜಮೀನು ನಿಗಮದ ವ್ಯವಸ್ಥಾಪಕ ನಿರ್ದೇ ಶಕರು ತಿಳಿಸಿದರು. 

Advertisement

ಕೆರೆ ಪುನಶ್ಚೇತನಕ್ಕೆ ಸರಕಾರ ಒತ್ತು ನೀಡಿದ್ದು, ಒತ್ತುವರಿ ಯಾಗಿರುವ ಕೆರೆಗಳ ಭೂಮಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಡಾ| ಎನ್‌.ವಿ. ಪ್ರಸಾದ್‌ ಸೂಚಿಸಿದರು.  ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಮಾತನಾಡಿ, ಸರಕಾರಿ ಭೂಮಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿರುವ ಪ್ರಕರಣ ಇತ್ಯರ್ಥಪಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ತಹಶೀಲ್ದಾರರಿಗೆ ತಿಳಿಸಿದರು.

ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಮಾಡುವುದು. ಸರಕಾರಿ ಜಮೀನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಮುಂದಾಗುವುದು. ಮತ್ತಿತರ ಕಾರ್ಯ ವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.  

ಸಾರ್ವಜನಿಕ ಜಮೀನುಗಳ ನಿಗಮದ ವಿಶೇಷ ಅಧಿಕಾರಿ ಆರ್‌. ನಾಗರಾಜ ಶೆಟ್ಟಿ ಅವರು ಮಾತನಾಡಿ ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ದಾಖಲಾಗಿವೆ ಎಂದರು. 

ಸರಕಾರಿ ಜಮೀನು ಒತ್ತುವರಿ ತೆರವು, ಒತ್ತುವರಿ ಬಗ್ಗೆ ದಾಖಲಾಗಿರುವ ದೂರುಗಳ ವಿಲೇವಾರಿ ಪರಿಶೀಲನೆ ಮಾಡುವುದು, ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲ ಯಕ್ಕೆ ಪ್ರಕರಣಗಳನ್ನು ವರ್ಗಾಯಿಸುವ ಬಗ್ಗೆ, 192 ಎ ಮತ್ತು 192 ಬಿ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಬಗ್ಗೆ ನ್ಯಾಯಾಲಯ ಪ್ರಕರಣಗಳ ಬಗ್ಗೆ ಮಾಹಿತಿ, ಸಿಸಿ 1, ಸಿಸಿ 2 ಪರಿಶೀಲನೆ, ಕೆರೆಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ  ನಮೂದಿಸುವುದು ಮತ್ತಿತರ ಬಗ್ಗೆ ಚರ್ಚೆ ನಡೆಯಿತು. 
 
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ ಕುಮಾರ್‌ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next