Advertisement

ಸಮುದಾಯ ಆರೋಗ್ಯ ಕೇಂದ್ರ ಉನ್ನತಿಗೆ ಕ್ರಮ  

05:38 PM Oct 08, 2021 | Team Udayavani |

ಭಾರತೀನಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತೀಕರಣಗೊಳಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆಅಧಿಕಾರಿಗಳೊಂದಿಗೆ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಗುವಂತೆ ಉನ್ನತೀಕರಣಗೊಳಿಸಲಾಗುದು ಎಂದು ತಿಳಿಸಿದರು.

Advertisement

ಅಗತ್ಯ ಕಾಮಗಾರಿ ಅಭಿವೃದ್ಧಿ: ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂಬುವುದು ನನ್ನ ಆಸೆಯಾಗಿದೆ. ಹಾಗಾಗಿ 2.5 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಗಳ ವಸತಿ ಗೃಹ ಅಭಿವೃದ್ಧಿ, ಸುಸಜ್ಜಿತ ಡ್ರೈನೇಜ್‌ ಮತ್ತು ಕಾಂಕ್ರೀಟ್‌ ರಸ್ತೆ, ಶವಾಗಾರದ ಕೊಠಡಿ ಅಭಿವೃದ್ಧಿ ಸೇರಿದಂತೆ ಆಸ್ಪತ್ರೆಯ ಒಳಾಂಗಣದ ಆವರಣದಲ್ಲಿ ಅಗತ್ಯವಿರುವ ಕಾಮಗಾರಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಆಸ್ಪತ್ರೆ ಅಭಿವೃದ್ಧಿ: 4 ಕೋಟಿ ರೂ. ವೆಚ್ಚದಲ್ಲಿ ಆಗಬೇಕಾಗಿರುವ ಕಾಮಗಾರಿ ಕೆಲಸಗಳಿಗೆ ನಕ್ಷೆ ತಯಾರಿಸಿ ಯೋಜನೆ ರೂಪಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಹಣ ಬಿಡುಗಡೆಗೊಳಿಸಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು.

ಸಹಕಾರ ನೀಡಲಿ: ಬಡತನದಲ್ಲಿ ಬದುಕು ಸಾಗಿಸುವ ಗ್ರಾಮೀಣ ಪ್ರದೇಶದ ರೈತರು, ಸಾರ್ವಜನಿಕರು ತಾವು ಸಂಪಾದಿಸಿದ ಹಣದಲ್ಲಿ ಹೆಚ್ಚಿನ ಹಣ ಖಾಸಗಿ ಚಿಕಿತ್ಸಾಲಯಗಳಿಗೆ ಆರೋಗ್ಯ ಸೇವೆಗಳಿಗಾಗಿ ವ್ಯಯಿಸುತ್ತಾರೆ. ಉಳಿದ ಹಣದಲ್ಲಿ ಜೀವನ ರೂಪಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇದನ್ನು ಮನಗಂಡು ಗ್ರಾಮೀಣ ಭಾಗದಲ್ಲೇ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಅತ್ಯಾಧುನೀಕ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಾಗಿದೆ.

ಇದನ್ನೂ ಓದಿ:- ಒಡೆದ ಮನೆಯಾದ ಬಿಜೆಪಿ : ಡಿ.ಕೆ.ಶಿವಕುಮಾರ|UDAYAVANI NEWS BULLETIN|8/10/2021

Advertisement

ಇದಕ್ಕೆ ವೈದ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಶಸ್ತ್ರಚಿಕ್ತಿತ್ಸಾ ಕೊಠಡಿ, ಹೆರಿಗೆ ವಾರ್ಡ್‌ ಮತ್ತು ನೇತ್ರವಿಭಾಗ, ಎಕ್ಸ್‌ರೇ, ಪ್ರಯೋಗಾಲಯ, ತುರ್ತು ನಿಗಾ ಘಟಕ, ಅಂಬ್ಯುಲೆನ್ಸ್‌ ಸೇವೆ ಸೇರಿದಂತೆ ಹಲವಾರು ಅಗತ್ಯ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ.  ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ಅಭಿವೃದ್ಧಿಗೊಳಿಸಲು ಸಹಕಾರ ಇದೆ. ವೈದ್ಯರು ಸಹ ರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಚಿಕಿತ್ಸೆ ನೀಡಬೇಕೆಂದು ಸಲಹೆ ನೀಡಿದರು. ಇದಕ್ಕೂ ಮೊದಲು ಆಸ್ಪತ್ರೆಯ ಕೊಠಡಿಗಳಿಗೆ ಹಾಗೂ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಿಥಿಲಗೊಂಡಿರುವ ವಸತಿ ಗೃಹ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆಯ ಎಇಇ ಶ್ರೀನಿವಾಸ್‌ಗೌಡ, ಎಇ ಚಂದ್ರಶೇಖರ್‌ ಮೂರ್ತಿ, ಗುತ್ತಿಗೆದಾರರಾದ ಚಂದ್ರು, ಜೆಡಿಎಸ್‌ ಮುಖಂಡರಾದ ಎಚ್‌.ಎಂ.ಮರಿಮಾದೇಗೌಡ, ಕೆ.ಟಿ.ಸುರೇಶ್‌, ಅಣ್ಣೂರು ವಿನು,, ದೊಡ್ಡರಸಿನಕೆರೆ ಪ್ರದೀಪ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next