ಶಹಾಪುರ: ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ಚರಂಡಿ ಮತ್ತು ಕಟ್ಟಡ ಕಾಮಗಾರಿಗಳನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೈದ್ಯರು ಮತ್ತು ಸಿಬ್ಬಂದಿ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆ ಸ್ವತ್ಛತೆ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ. ಆದ್ದರಿಂದ ಜಿಲ್ಲೆಯಲ್ಲಿಯೇ ಮಾದರಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕಾರಣ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಈಗಿನಿಂದಲೇ ಸಮರ್ಪಕವಾಗಿ ಕರ್ತವ್ಯದಲ್ಲಿ ಮಾನವೀಯತೆ ಮೇರೆಗೆ ಸೇವಾ ಮನೋಭಾವದೊಂದಿಗೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಮಾದರಿ ಆಸ್ಪತ್ರೆಗೆ ಹೆಸರು ವಾಸಿಯಾಗಲಿದೆ. ಅದಕ್ಕೆಲ್ಲ ಇಲ್ಲಿನ ಸಿಬ್ಬಂದಿ ವೈದ್ಯ
ಅಧಿಕಾರಿ ಸಹಕಾರ ಬಹು ಮುಖ್ಯ ಎಂದರು.
ಆಸ್ಪತ್ರೆಯಲ್ಲಿ ಶೌಚಾಲಯ ಸೇರಿದಂತೆ ಕುಡಿಯುವ ನೀರು ಮತ್ತು ರೋಗಿಗಳಿಗೆ ದೊರೆಯಬೇಕಾದ ಇತರೆ ಸೌಲಭ್ಯ ಕಲ್ಪಿಸುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಮೂಲ ಸೌಲಭ್ಯ ಕಲ್ಪಿಸಲು ಬೇಕಾದ ಸಹಕಾರ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ| ಮಲ್ಲಪ್ಪ ಕಣಜಿಗಿಕರ್, ಡಾ| ಶರಣಗೌಡ, ಡಾ| ಗಾಯಕವಾಡ, ಡಾ| ವೆಂಕಟೇಶ ಬೈರಾಮಡಗಿ, ಹಿರಿಯ ಆರೋಗ್ಯ ಸಹಾಯಕರು ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಡೆದ ಚರಂಡಿ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು. ಇತರೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.