Advertisement

ಸಮಸ್ಯೆ ತುರ್ತು ಪರಿಹಾರಕ್ಕೆ ಸರಕಾರದ ಭರವಸೆ 

10:14 AM Oct 05, 2018 | Team Udayavani |

ಮಹಾನಗರ: ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್‌ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಕೆಲವು ಕಡೆಗಳಲ್ಲಿ ಸಮರ್ಪಕವಾಗಿ ನಿರ್ವಹಣೆ ಆಗದ ಕಾರಣ ಎದುರಾಗಿರುವ ಅಪಾಯದ ಕುರಿತು ‘ಸುದಿನ’ ನಾಲ್ಕು ದಿನಗಳಿಂದ ನಡೆಸಿದ ‘ವಿದ್ಯುತ್‌- ಆಪತ್ತು ಇರಲಿ ಎಚ್ಚರ’ ಕುರಿತ ಅಭಿಯಾನದಲ್ಲಿ ಉಲ್ಲೇಖೀಸಿರುವ ಸಮಸ್ಯೆಗಳಿಗೆ ಸರಕಾರವು ತುರ್ತಾಗಿ ಸ್ಪಂದಿಸುವ ಭರವಸೆ ನೀಡಿದೆ.

Advertisement

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, ಶೀಘ್ರದಲ್ಲೇ ಮೆಸ್ಕಾಂ ಸಹಿತ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್‌ ಸಂಪರ್ಕ- ಸರಬರಾಜಿಗೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳು, ಎಲ್‌ಟಿಡಿ ಬಾಕ್ಸ್‌ಗಳು, ಬೀದಿದೀಪಗಳು, ಅಪಾಯದ ರೀತಿ ಪಾರ್ಕ್‌, ಶಾಲಾ ಮಕ್ಕಳು ತೆರಳುವ ಜಾಗ ಹಾಗೂ ರಸ್ತೆಗೆ ಜೋತು ಬಿದ್ದಿರುವ ತಂತಿಗಳು, ಸ್ವಿಚ್‌ ಬೋರ್ಡ್‌ಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ಪ್ರಯತ್ನ ಮಾಡಿತ್ತು. ಆ ಮೂಲಕ, ವಿದ್ಯುತ್‌ ಶಾಕ್‌ ಅನಾಹುತದ ಬಗ್ಗೆ ಜನರನ್ನು ಎಚ್ಚರಿಸುವ ಜತೆಗೆ ಮೆಸ್ಕಾಂ, ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಸಹಿತ ನಗರದಲ್ಲಿ ಈ ರೀತಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷé ವಹಿಸಿರುವವರ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗಿದೆ.

ಎಷ್ಟೋ ಕಡೆಗಳಲ್ಲಿ ಇಲಾಖೆಯವರ ಗಮನಕ್ಕೂ ಬಾರದೆ ಅಪಾಯ ತಂದೊಡ್ಡುವ ಸ್ಥಳಗಳಿದ್ದು, ಅವುಗಳನ್ನು ಸಾರ್ವಜನಿಕರು ಗಮನಕ್ಕೆ ತಂದಾಗ ತುರ್ತಾಗಿ ಸಮಸ್ಯೆಗೆ ಸ್ಪಂದಿಸುವುದು ಕೂಡ ಆಯಾ ಇಲಾಖೆಗಳ ಕರ್ತವ್ಯ. ಹೀಗಿರುವಾಗ, ಯಾವುದೇ ಸಾರ್ವಜನಿಕ ಸಮಸ್ಯೆ ಹಾಗೂ ಜನರಿಗೆ ಎದುರಾಗುವ ಅನಾಹುತದ ಮುನ್ನೆಚ್ಚರಿಕೆ ನೀಡಿದಾಗ ಅದಕ್ಕೆ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕು. ಯಾವುದೇ ಇಲಾಖೆಯನ್ನು ಗುರಿಯಾಗಿಸಿಕೊಂಡು ಈ ಅಭಿಯಾನವನ್ನು ನಡೆಸಿಲ್ಲ ಎನ್ನುವುದು ಸ್ಪಷ್ಟ.

ವಾರದೊಳಗೆ ಪರಿಹಾರ
ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಹಾಗೂ ಸರಬರಾಜಿಗೆ ಅಳವಡಿಸಲಾಗಿರುವ ವಯರ್‌, ಟ್ರಾನ್ಸ್‌ಫಾರ್ಮರ್‌ಗಳು, ಎಲ್‌ಟಿಡಿ ಬಾಕ್ಸ್‌ಗಳು ವಿದ್ಯುತ್‌ ಶಾಕ್‌ ಹೊಡೆಯುವ ರೀತಿಯಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿರುವ ವರದಿ ಕುರಿತಂತೆ ಮೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಇನ್ನೊಂದೆಡೆ, ಅಪಾಯಕಾರಿಯಾಗಿರುವ ವಿದ್ಯುತ್‌ ತಂತಿ, ಉಪಕರಣಗಳು ಸಾರ್ವಜನಿಕ ಸ್ಥಳದಲ್ಲಿದ್ದರೆ ಶೀಘ್ರದಲ್ಲಿ ಮೆಸ್ಕಾಂ ಹಾಗೂ ಇತರ ಇಲಾಖೆಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ. ಈ ಅಭಿಯಾನದಡಿ ಉಲ್ಲೇಖವಾಗಿರುವ ವಿದ್ಯುತ್‌ ಅಪಾಯ ಸೂಚಿಸುವ ಸಮಸ್ಯೆಗಳಲ್ಲಿ ಮಂಗಳೂರು ಪಾಲಿಕೆಯ ನಿರ್ವಹಣೆಯಲ್ಲಿ ಏನಾದರೂ ಲೋಪಗಳಿದ್ದರೆ ಅದರ ಬಗ್ಗೆ ವಾರದೊಳಗೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಭಾಸ್ಕರ್‌ ಕೆ. ತಿಳಿಸಿದ್ದಾರೆ.

ಈ ಅಭಿಯಾನ ಕೈಗೊಂಡ ಕ್ಷಣದಿಂದಲೇ ಓದುಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ತಮ್ಮ ವಾರ್ಡ್‌ಗಳಲ್ಲಿರುವ ವಿದ್ಯುತ್‌ ಕಂಬಗಳ ಅಪಾಯಕಾರಿ ಸ್ಥಿತಿಯನ್ನು ಚಿತ್ರ ಸಹಿತ ಕಚೇರಿಗೆ ಕಳುಹಿಸುತ್ತಿದ್ದಾರೆ. ಮೆಸ್ಕಾಂ ಅವರನ್ನು ಕೇಳಿದರೆ ಅವರು ಪಾಲಿಕೆ ಎನ್ನುತ್ತಾರೆ. ಪಾಲಿಕೆಯಲ್ಲಿ ಕೇಳಿದಾಗ ಅವರು ಇನ್ನೊಂದು ಇಲಾಖೆಗೆ ಬೊಟ್ಟು ಮಾಡುತ್ತಾರೆ. ಈ ಕಾರಣದಿಂದ ಅಪಾಯಕಾರಿ ವಿದ್ಯುತ್‌ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದನೆ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. 

ಕಾನೂನು ಕ್ರಮಕ್ಕೆ ವಕೀಲರ ಸಲಹೆ 
‘ವಿದ್ಯುತ್‌ ಆಪತ್ತು – ಇರಲಿ ಎಚ್ಚರ’ ಎಂಬ ಸಾಮಾಜಿಕ ಕಳಕಳಿಯ ಆಂದೋಲನವನ್ನು ‘ಉದಯವಾಣಿ-ಸುದಿನ’ವು ನಾಲ್ಕು ದಿನಗಳಿಂದ ಕೈಗೆತ್ತಿಕೊಂಡಿದ್ದು, ಈ ಬಗ್ಗೆ ವಕೀಲರಾದ ವಿವೇಕಾನಂದ ಪನಿಯಾಲ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.  ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷೆ ಕಾಪಾಡಿಕೊಳ್ಳಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಂಗವು ಹಲವು ತೀರ್ಪುಗಳಲ್ಲಿ ಎಚ್ಚರಿಸಿದರೂ ಈ ಕುರಿತು ವಿಶೇಷ ಶಾಸನವನ್ನು ಈವರೆಗೆ ರೂಪಿಸದಿರುವುದು ಶಾಸಕಾಂಗ ಹಾಗೂ ಕಾರ್ಯಾಂಗದ ಕಾರ್ಯನಿರ್ವಹಣೆ ವೈಫಲ್ಯತೆಗೆ ಹಿಡಿದಿರುವ ಕೈಗನ್ನಡಿ. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷೆಯನ್ನು ಕಾಪಾಡಿಕೊಳ್ಳಲು ಸ್ಥಳೀಯಾಡಳಿತ, ವಿದ್ಯುತ್‌ ಸರಬರಾಜು ಸಂಸ್ಥೆಗಳು, ಒಳಚರಂಡಿ ನಿರ್ವಹಣೆ ಮಂಡಳಿಗಳು, ದೂರವಾಣಿ ಕೇಬಲ್‌ಗ‌ಳನ್ನು ಅಳವಡಿಸುವ ಕಂಪೆನಿಗಳು ಸಹಿತ ಸರಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳು ವಿಫಲವಾಗಿದ್ದು, ರಸ್ತೆ ಹಾಗೂ ಫುಟ್‌ಪಾತ್‌ ಗಳನ್ನು ಮನಬಂದಂತೆ ಬಳಸಲಾಗುತ್ತಿದೆ. ಸಾರ್ವಜನಿಕರ ಸುರಕ್ಷೆ ಕುರಿತು ಈ ಸೇವಾ ಸಂಸ್ಥೆಗಳು ಸಂವೇದನಾರಹಿತವಾಗಿ ವರ್ತಿಸುತ್ತಿರುವುದು ಖೇದಕರ. ರಸ್ತೆ ಬದಿ ದಾರಿಯನ್ನು ನಿರ್ಮಿಸಬೇಕೆಂದು ನಿರ್ದೇಶಿಸುವ ಕಾನೂನು ಈ ದೇಶದಲ್ಲಿ ಅಸ್ತಿತ್ವದಲ್ಲಿದ್ದರೂ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿದ್ಯುತ್‌ ಸರಬರಾಜು ಸಂಸ್ಥೆಗಳು ‘ಸ್ಮಾರ್ಟ್‌ ಸಿಟಿ’ಯಾದ ಮಂಗಳೂರಿನಲ್ಲಿ ಸೃಷ್ಟಿಸಿರುವುದು ವಿಪರ್ಯಾಸ. ಇಂತಹ ಅಪಾಯಗಳ ವಿರುದ್ಧ ಉಪವಿಭಾಗೀಯ ದಂಡಾಧಿಕಾರಿಗಳು ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌ನ‌ ಕಲಂ 133ರನ್ವಯ ಸ್ವಯಂ ಪ್ರೇರಿತ ಕ್ರಮವನ್ನು ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ಜತೆಗೆ ಪೊಲೀಸ್‌ ಇಲಾಖೆ ಸಹ ಸ್ವಯಂ ಪ್ರೇರಿತ ಕಾನೂನು ಕ್ರಮ ಜರಗಿಸಬಹುದು. ಅದೇ ರೀತಿ ಇಂತಹ ಅಪಾಯಕಾರಿ ಅಡ್ಡಿ ಆತಂಕಗಳನ್ನು ತೊಡೆದು ಹಾಕಲು ಮಹಾನಗರ ಪಾಲಿಕೆ ಆಯುಕ್ತರಿಗೆ 1976ರ ಕರ್ನಾಟಕ ಪೌರ ನಿಗಮಗಳ ಅಧಿನಿಯಮದನ್ವಯ ಸಹ ಅಧಿಕಾರವಿದೆ. ಆದರೆ, ಇಂತಹ ಅಪಾಯಕಾರಿ ಸ್ಥಿತಿಗಳು ಅವರ ಗಮನಕ್ಕೆ ಬಾರದಿರುವುದು ಶೋಚನೀಯ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಸುಸ್ಥಿತಿಯಲ್ಲಿಡಲು ಕ್ರಮ: ಮೆಸ್ಕಾಂ 
ನಗರ ವ್ಯಾಪ್ತಿಯಲ್ಲಿ ಮೆಸ್ಕಾಂನಿಂದ ನಿರ್ವಹಣೆಯಾಗುವ ವಿದ್ಯುತ್‌ ಕಂಬಗಳನ್ನು ಸುಸ್ಥಿತಿಯಲ್ಲಿಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಅಪಾಯಕಾರಿಯಾಗಿರುವ ಕಂಬಗಳನ್ನು ಸರಿಪಡಿಸಲು ಮೆಸ್ಕಾಂ ನಿರ್ಧರಿಸಿದೆ. ಈ ಬಗ್ಗೆ ವಿವರವಾದ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಮೆಸ್ಕಾಂನಿಂದ ವರದಿಗೆ ಕ್ರಮ
ಸಾರ್ವಜನಿಕರಿಗೆ ಅಪಾಯಕಾರಿ ಆಗುವ ರೀತಿಯಲ್ಲಿ ವಿದ್ಯುತ್‌ ತಂತಿಗಳು ಇರಕೂಡದು. ಮೆಸ್ಕಾಂ ಸಹಿತ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಎಚ್ಚರ ವಹಿಸಬೇಕು. ನಗರದ ಕೆಲವೆಡೆ ಅಪಾಯಕಾರಿ ವಿದ್ಯುತ್‌ ತಂತಿಗಳ ವರದಿ ಬಗ್ಗೆ ಮೆಸ್ಕಾಂನಿಂದ ಸೂಕ್ತ ವರದಿ ಪಡೆಯಲಾಗುವುದು.
– ಶಶಿಕಾಂತ್‌ ಸೆಂಥಿಲ್‌,
  ದ.ಕ. ಜಿಲ್ಲಾಧಿಕಾರಿ

ವಾರದೊಳಗೆ ಸಭೆ
ಸುದಿನ ವರದಿ ಕುರಿತು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಪಾಲಿಕೆ ನಿರ್ವಹಣೆಯಲ್ಲಿ ಆಗಿರಬಹುದಾದ ಲೋಪಗಳ ಬಗ್ಗೆ ವಾರದೊಳಗೆ ಪಾಲಿಕೆಯ ವಿದ್ಯುತ್‌ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು.
– ಭಾಸ್ಕರ್‌ ಕೆ., ಮೇಯರ್‌, ಮನಾಪ 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next