ಮೂಲ್ಕಿ: ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಅವಕಾಶವನ್ನು ಕಲ್ಪಿಸುವಲ್ಲಿ ಸಣ್ಣ ಕೈಗಾರಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸರಕಾರವೂ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಅವರು ಮೂಲ್ಕಿ ಕಾರ್ನಾಡು ಕೈಗಾರಿಕಾ ಪ್ರದೇಶದ ವಿವಿಧ ರಸ್ತೆಗಳಿಗೆ 2.90 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಗುತ್ತಿಗೆದಾರರು ಕೆಲಸ ಮಾಡಬೇಕು. ಇಲ್ಲಿನ ಉದ್ಯಮಿಗಳು ಸರಕಾರದಿಂದ ನಡೆಸುವ ಈ ಕಾಮಗಾರಿಗೆ ತಮಗಾಗುವ ಕೆಲವು ಅಡಚಣೆಗಳನ್ನು ಸಹಿಸಿಕೊಂಡು ಸಹಕಾರ ನೀಡುವ ಜತೆಗೆ ಇಲ್ಲಿಯ ಕೆಲಸದಲ್ಲಿ ನ್ಯೂನ್ಯತೆ ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕು. ನನ್ನ ಉದ್ದೇಶ ನ್ಯಾಯಪರ ಕೆಲಸ ಮತ್ತು ಉತ್ತಮ ದರ್ಜೆಯ ರಸ್ತೆ ನಿರ್ಮಾಣ ಮಾಡುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯವರು ಮೂಲ್ಕಿಯ ಅಭಿವೃದ್ಧಿಗೆ ಹಲವು ಕೋಟಿ ರೂ. ಮೊತ್ತಗಳನ್ನು ಒದಗಿಸಿದ್ದಾರೆ. ಕೇವಲ ಕುಡಿಯುವ ನೀರಿನ ಯೋಜನೆ ಮತ್ತು ಬಸ್ ನಿಲ್ದಾಣಕ್ಕೆ 19 ಕೋಟಿ ರೂ. ಒದಗಿಸಿದ್ದಾರೆ. ಇಲ್ಲಿಯ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಅಗ್ನಿಶಾಮಕ ದಳದ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೂಲ್ಕಿ ನಗರವನ್ನು ತಾಲೂಕು ಕೇಂದ್ರವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಪೂರಕವಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು. ಇಲ್ಲಿನ ಮೂಲ ಸೌಕರ್ಯಗಳಲ್ಲಿ ರಸ್ತೆ, ದಾರಿ ದೀಪಗಳ ಕಾಮಗಾರಿಯಲ್ಲಿ ಅಡೆತಡೆ ಕಂಡುಬಂದರೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ಪರಿಣಾಮ ಆಗದಿದ್ದಲ್ಲಿ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಅವರು ತಿಳಿಸಿದರು.
ಕಾರ್ನಾಡು ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಎನ್. ಜಯ ಶೆಟ್ಟಿ ಮಾತನಾಡಿದರು.ನಗರ ಪಂಚಾಯತ್ ಸದಸ್ಯ ಬಿ.ಎಂ. ಆಸೀಫ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಬೈಕಂಪಾಡಿ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಗೌರವ ಹೆಗ್ಡೆ, ಇಲಾಖೆಯ ಎಂಜಿನಿಯರ್ ಜನಾರ್ದನ ನಾಯಕ್, ಸಂಘದ ಕಾರ್ಯದರ್ಶಿ ಪ್ರಶಾಂತ್ ಕಾಂಚನ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ವಿಮಲಾ ಪೂಜಾರಿ, ಶೈಲೇಶ್ ಕುಮಾರ್, ಹಸನ್ ಬಶೀರ್ ಕುಳಾಯಿ, ಪುತ್ತು ಬಾವಾ, ಸಂದೀಪ್ ಚಿತ್ರಾಪು, ಯೋಗೀಶ್ ಕೋಟ್ಯಾನ್, ಕಲಾವತಿ ಕಲ್ಲವ್ವ, ಅಶೋಕ್ ಪೂಜಾರ್ ,ಉದ್ಯಮಿ ಆಶ್ರಫ್ ಕರ್ನಿರೆ, ಉದ್ಯಮಿಗಳಾದ ನಾಗರಾಜ, ಅಜಿತ್ ಶೆಟ್ಟಿ, ಸದಾಶಿವ ಆಚಾರ್ಯ, ದಿನೇಶ್ ಹೆಗ್ಡೆ ಮಾನಂಪಾಡಿ, ವಿಕ್ಟರ್ ಸೆರಾವು, ಉದಯ ಪೈ, ಎ.ಎಚ್. ರಫಿಕ್, ಅರ್ಜುನ್ ಹಿರೇಮಠ್ , ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಡಾ| ಕೆ.ಹರಿಪ್ರಸಾದ್ ಶೆಟ್ಟಿ, ಲೋಕೇಶ್ ಕೋಟ್ಯಾನ್, ಭೀಮಾಶಂಕರ್, ರಾಘವ ಸುವರ್ಣ, ಮಹಾಬಲ ಸನಿಲ್, ರಿಕ್ಷಾ ಮಾಲಕ ಚಾಲಕ ಸಂಘದ ಉಮೇಶ್ ದೇವಾಡಿಗ ಇದ್ದರು. ನವೀನ್ ಪುತ್ರನ್ ವಂದಿಸಿದರು.