ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸಿನಂತೆ ವೇತನ, ಭತ್ಯೆ ಜಾರಿ ಹೋರಾಟ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಹೇಳಿಕೆಗಳು ಗೊಂದಲ ಮೂಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸಿನಂತೆ ವೇತನ, ಭತ್ಯೆ ಕಲ್ಪಿಸಬೇಕೆಂಬ ವಿಚಾರ ಇದೀಗ 2 ಸಂಘಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಒಕ್ಕೂಟದ ಪದಾಧಿಕಾರಿಗಳು ಮೇ 4ರಂದು ಮುಷ್ಕರ ನಡೆಸುವುದಾಗಿ ಪುನರುಚ್ಚರಿಸಿದ್ದರೆ, ಸಂಘದ ಪದಾಧಿ ಕಾರಿಗಳು ಮುಷ್ಕರವಿಲ್ಲ ಎಂದು ಸ್ಪಷ್ಟನೆ ನೀಡಿರುವುದು
ನೌಕರರಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರಿ ನೌಕರರಿಗೆ 2016ರ ಜನವರಿಯಿಂದಲೇ ಏಳನೇ ವೇತನ ಆಯೋಗದ ಶಿಫಾರಸಿನಂತೆ ವೇತನ, ಭತ್ಯೆ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರಿ ನೌಕರರಿಗೆ ಸಿಗುತ್ತಿಲ್ಲ. ಏಳನೇ ವೇತನ ಆಯೋಗದ ಶಿಫಾರಸು ಸಂಬಂಧ ಆಯೋಗದ ಅಧ್ಯಕ್ಷರು, ಸದಸ್ಯರನ್ನು ಏಪ್ರಿಲ್‌ನೊಳಗೆ ನೇಮಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ
ಪ್ರಕಟಿಸಿದರೂ ಜಾರಿಯಾಗಿಲ್ಲ. ಹಾಗಾಗಿ ಮೇ 4ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಎಂದು ಅಖೀಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಎಂ.ವೆಂಕಟೇಶ್ ತಿಳಿಸಿದ್ದಾರೆ.
ಮುಷ್ಕರ ಇಲ್ಲ: ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಲ್ಲಿ ಮಾನ್ಯತೆ ಪಡೆದ ಸಂಘವಾಗಿದ್ದು, 6 ಲಕ್ಷಕ್ಕೂ ಹೆಚ್ಚು ನೌಕರರು ನೋಂದಣಿಯಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ, ಭತ್ಯೆ ನೀಡಬೇಕೆಂಬ ಬೇಡಿಕೆಗೆ ಸಿಎಂ ಸ್ಪಂದಿಸುತ್ತಿದ್ದು, ಯಾವುದೇ ಮುಷ್ಕರ ನಡೆಸುತ್ತಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ
ಸ್ಪಷ್ಟಪಡಿಸಿದ್ದಾರೆ.