Advertisement

ಫೆ.18-19ರಂದು ಸರ್ಕಾರಿ ನೌಕರರ ಕ್ರೀಡಾಕೂಟ

04:27 PM Feb 03, 2021 | Team Udayavani |

ಯಾದಗಿರಿ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಫೆ.18 ಮತ್ತು 19ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ|ರಾಗಪ್ರಿಯ ಆರ್‌. ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕವೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಆಯೋಜನೆ ಹಿನ್ನೆಲೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.

ಆಯಾ ಅಧಿಕಾರಿಗಳು ತಮಗೆ ವಹಿಸಿದ ಹೊಣೆಗಾರಿಕೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌, ಕುಸ್ತಿ, ಕಬಡ್ಡಿ, ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌, ಹಾಕಿ, ಟೇಬಲ್‌ ಟೆನ್ನಿಸ್‌, ಟೆನ್ನಿಸ್‌, ಥ್ರೋಬಾಲ್‌ ಸೇರಿದಂತೆ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್‌, ಬ್ಯಾಡ್ಮಿಂಟನ್‌, ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿಂದೂಸ್ತಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಭರತನಾಟ್ಯ, ಜನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಸರ್ಕಾರಿ ನೌಕರರು ಭಾಗವಹಿಸಬೇಕು, ಅವರಿಗೆ ಊಟೋಪಹಾರ, ಕ್ರೀಡಾ ಸಾಮಗ್ರಿಗಳ ಪೂರೈಕೆ, ನಿರ್ಣಾಯಕರ ನಿಯೋಜನೆ, ಪ್ರಥಮ ಚಿಕಿತ್ಸೆ, ಔಷಧೋಪಚಾರ ವ್ಯವಸ್ಥೆ, ಆಂಬ್ಯುಲೆನ್ಸ್‌ ಸೇರಿದಂತೆ ಇತರೆ ವ್ಯವಸ್ಥೆ ಮಾಡಿಕೊಳ್ಳಬೇಕು, ಪೊಲೀಸ್‌ ಬಂದೋಬಸ್ತ್ ಒದಗಿಸಬೇಕು ಎಂದು ಸಂಬಂಧಪಟ್ಟ ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಕ್ರೀಡಾಕೂಟದ ಯಶಸ್ಸಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಬೇಕು, ಕ್ರೀಡಾಕೂಟದಲ್ಲಿ ಭಾಗವಹಿಸುವ ಸಿಬ್ಬಂದಿ ತಮ್ಮ ಇಲಾಖೆ ಮುಖ್ಯಸ್ಥರಿಂದ ಗುರುತಿನ ಚೀಟಿ ಪಡೆದು ಫೆ.15ರೊಳಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು, ಕ್ರೀಡಾಪಟುಗಳಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುವುದು, ಕ್ರೀಡಾಂಗಣದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next