Advertisement

Fake News ತಡೆಗೆ ಸರಕಾರಿ ಆಜ್ಞೆಯೊಂದೇ ಅಸ್ತ್ರ: ಸಚಿವ ಡಾ| ಜಿ. ಪರಮೇಶ್ವರ

11:20 PM Aug 21, 2023 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ಕೋಮು ಧ್ರುವೀಕರಣಕ್ಕೆ ಕಾರಣವಾಗುವ ಮಾಹಿತಿ ಹಂಚಿಕೊಳ್ಳುವುದರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ರಾಜ್ಯ ಸರಕಾರ ಚಾಲನೆ ನೀಡಿದೆ.

Advertisement

ಸಿಎಂ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದೆ. ಮೊದಲ ಹಂತದಲ್ಲಿ ಫ್ಯಾಕ್ಟ್ ಚೆಕ್‌ ಘಟಕ ಪ್ರಾರಂಭಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಯಾವ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ರೂಪುರೇಷೆ ನಿರ್ಧರಿಸುವ ಹೊಣೆಗಾರಿಕೆಯನ್ನು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಒಪ್ಪಿಸಲಾಗಿದೆ.

ಗೃಹ ಸಚಿವ ಡಾ| ಜಿ. ಪರಮೇಶ್ವರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯ
ದರ್ಶಿ ಡಾ| ರಜನೀಶ್‌ ಗೋಯಲ್‌, ಪೊಲೀಸ್‌ ಮಹಾ ನಿರ್ದೇಶಕ ಆಲೋಕ್‌ ಮೋಹನ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಸಹಿತ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸುಳ್ಳು ಸುದ್ದಿ ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ಧ್ರುವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿರುವ ಸಿಎಂ, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್‌ ಘಟಕ ಸ್ಥಾಪನೆ ಸಹಿತ ಅಗತ್ಯವಿರುವ ಎಲ್ಲ ನಿಯಮ ಮತ್ತು ಕಾನೂನು ರೂಪಿಸುವಂತೆ ಸೂಚನೆ ನೀಡಿದರು. ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್‌ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿನ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮ ಆಗಬೇಕೆಂದು ಸೂಚನೆ ನೀಡಿದರು.

ಈ ಹಂತದಲ್ಲಿ ನಿಯಮಾವಳಿ ರೂಪಿಸುವ ಮಾರ್ಗದ ಬಗ್ಗೆ ಚರ್ಚೆ ನಡೆಯಿತು. ಸೈಬರ್‌ ಕಾನೂನುಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಸೇರಿದ್ದು, ಇವುಗಳನ್ನು ತಿದ್ದುಪಡಿ ಮಾಡಲು ರಾಜ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ರಾಜ್ಯವು ಕೇಂದ್ರದ ಕಾನೂನಿಗೆ ಪೂರಕವಾಗಿ ಪ್ರತ್ಯೇಕ ಐಟಿ ಕಾಯ್ದೆ ರೂಪಿಸಬೇಕೋ, ಅಥವಾ ಸೈಬರ್‌ ನೀತಿ ಜಾರಿಗೆ ತರಬೇಕೋ ಎಂಬ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಲಭ್ಯವಿರುವ ಐಪಿಸಿ, ಸಿಆರ್‌ಪಿಸಿ ಕಾಯ್ದೆಗಳನ್ನು ಆಧರಿಸಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಪ್ರತ್ಯೇಕ ಸರಕಾರಿ ಆದೇಶವನ್ನು ಹೊರಡಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

Advertisement

ಫೇಕ್‌ ಸುದ್ದಿ ಜಾಲ ಜಾಗತಿಕವಾಗಿ ಬಾಲ್ಯಾವಸ್ಥೆ ಯಲ್ಲಿದ್ದರೂ ಕಾಲಾಂತರದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಸುಳ್ಳು ಸುದ್ದಿ ಬಳಕೆ ಮಾಡುವವರಿಗೆ ಶಿಕ್ಷೆ ಆಗಬೇಕು. ಈ ಸಮಿತಿ ಕೂಡಲೇ ರಚಿಸಿ ಸಾಮರ್ಥ್ಯ ಹೆಚ್ಚಿಸುವ ಕೆಲಸ ಆಗಬೇಕು.
-ಡಾ| ಜಿ. ಪರಮೇಶ್ವರ,
ಗೃಹ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next