Advertisement

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

11:15 PM Sep 25, 2023 | Team Udayavani |

ಕಡಬ: ತಿಂಗಳ ಹಿಂದೆ ಮಂಗಳೂರಿನಲ್ಲಿ ಖಾಸಗಿ ಬಸ್‌ ನಿರ್ವಾ ಹಕರೋರ್ವರು ಚಲಿಸುತ್ತಿರುವ ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕಡಬದಲ್ಲಿಯೂ ಸೆ. 24ರಂದು ಅಂತಹುದೇ ಘಟನೆ ಸಂಭವಿಸಿದೆ.

Advertisement

ಆದರೆ ಇಲ್ಲಿ ವೃದ್ಧ ಪ್ರಯಾಣಿಕರೋರ್ವರು ಕೆಎಸ್ಸಾರ್ಟಿಸಿ ಬಸ್‌ನಿಂದ ಆಯತಪ್ಪಿ ತೆರೆದ ಬಾಗಿಲಿನಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.

ಮಂಗಳೂರಿನ ಘಟನೆ ಸಂಭವಿಸಿದ ಕೂಡಲೇ ಖಾಸಗಿ ಸರ್ವೀಸ್‌ ಬಸ್‌ಗಳಲ್ಲಿ ಬಾಗಿಲುಗಳಿಲ್ಲದೇ ಇರುವುದರಿಂದ ಆಪಾಯ ಸಂಭವಿಸಿದೆ ಎನ್ನುವ ನೆಲೆಯಲ್ಲಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಖಾಸಗಿ ಬಸ್‌ಗಳಿಗೆ ಬಾಗಿಲು ಅಳವಡಿಸುವಂತೆ ಸೂಚಿಸಿದ್ದರು. ಬಾಗಿಲಲ್ಲಿ ನಿಂತು ಪ್ರಯಾಣಿಸದಂತೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ವಿಪರ್ಯಾಸವೆಂದರೆ ಸರಕಾರಿ ಬಸ್‌ಗಳಲ್ಲಿ ಬಾಗಿಲುಗಳಿದ್ದರೂ ಅದನ್ನು ಮುಚ್ಚು ವವರಿಲ್ಲದೇ ಅಪಾಯ ಸಂಭವಿಸಿದೆ. ಇಲ್ಲಿ ಪ್ರಯಾಣಿಕರಿಗೆ ಅಪಾಯ ಸಂಭವಿಸಿದರೆ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಜವಾಬ್ದಾರರಾಗುತ್ತಾರೆ. ಕಡಬದ ಘಟನೆಗೆ ಸಂಬಂಧಿಸಿ ಚಾಲಕ ಮತ್ತು ನಿರ್ವಾಹಕನ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕರಿಗೂ ಇದೆ ಜವಾಬ್ದಾರಿ
ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಪ್ರಯಾಣಿಕರ ಹೆಚ್ಚಿನ ದಟ್ಟಣೆ ಇರುತ್ತದೆ. ಆಗ ಚಾಲಕ, ನಿರ್ವಾಹಕ ಇಬ್ಬರೂ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಅದರ ಜತೆಗೆ ಪ್ರಯಾಣಿಕರೂ ತಮ್ಮ ಸುರಕ್ಷೆಯ ಕುರಿತು ಗಮನ ನೀಡಬೇಕಿರುವುದು ಅಗತ್ಯ. ಬಹುತೇಕ ಸಂದರ್ಭಗಳಲ್ಲಿ ಪ್ರಯಾಣಿಕರು ಅನಗತ್ಯ ವಾಗಿ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣಿಸಿ ಅಪಾಯ ತಂದುಕೊಂಡದ್ದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುರಿಂದ ಬಸ್‌ನ ಚಾಲಕ ಮತ್ತು ನಿರ್ವಾಹಕರು ಹೆಚ್ಚು ಜಾಗರೂಕರಾಗಿರಬೇಕು. ಈ ನಿಟ್ಟಿನಲ್ಲಿ ಸಾರಿಗೆ ನಿಗಮದ ಅಧಿಕಾರಿಗಳು ಚಾಲಕ ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಮೂಲಕ ದುರ್ಘ‌ಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

Advertisement

2 ಬಾಗಿಲಿರುವ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುವಾಗ ಬಾಗಿಲು ಗಳ ನಿರ್ವಹಣೆ ನಿರ್ವಾಹಕರಿಗೆ ಸಾಧ್ಯವಾಗುವುದಿಲ್ಲ. ಆದುದರಿಂದ ಸ್ವಯಂ ಚಾಲಿತ ಬಾಗಿಲುಗಳನ್ನು ಹಂತ ಹಂತವಾಗಿ ಅಳವಡಿಸುವ ಚಿಂತನೆಯಿದೆ. ಹೊಸದಾಗಿ ಬರುವ ಬಸ್‌ಗಳಲ್ಲಿ ಸ್ವಯಂಚಾಲಿತ ಬಾಗಿಲನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಜಾಗರೂಕರಾಗಿರುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
– ಜಯಕರ ಶೆಟ್ಟಿ , ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಪುತ್ತೂರು

-ನಾಗರಾಜ ಕಡಬ

 

Advertisement

Udayavani is now on Telegram. Click here to join our channel and stay updated with the latest news.

Next