Advertisement

ಅನೈತಿಕ ಚಟುವಟಿಕೆ ತಾಣವಾದ ಸರ್ಕಾರಿ ಕಟ್ಟಡ

09:26 PM May 06, 2019 | Lakshmi GovindaRaj |

ಸಂತೆಮರಹಳ್ಳಿ: ಸಂತೆಮರಹಳ್ಳಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾನ, ವಿದ್ಯಾದಾನ ನೀಡಿದ ವಸತಿ ಶಾಲೆ ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Advertisement

15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ: ಹೋಬಳಿ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುವ ಮಾರ್ಗ ಮಧ್ಯೆ ರೇಷ್ಮೆಗೂಡಿನ ಮಾರುಕಟ್ಟೆ ಮುಂಭಾಗ ಎರಡು ಸುಸಜ್ಜಿತವಾದ ಕಟ್ಟಡಗಳಿವೆ. ಇದಕ್ಕೆ ಸುತ್ತು ಗೋಡೆಯ ವ್ಯವಸ್ಥೆಯೂ ಇದೆ. 3 ಎಕರೆ ವಿಸ್ತೀರ್ಣದಲ್ಲಿ ಮೈದಾನವಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಉತ್ತಮವಾಗಿದೆ.

ಇಷ್ಟಿದ್ದರೂ ರೇಷ್ಮೆ ಇಲಾಖೆಗೆ ಸೇರಿದ ಈ ಕಟ್ಟಡಗಳನ್ನು 2005ನೇ ಸಾಲಿನಲ್ಲಿ ಆಗಿನ ಸಂತೆಮರಳ್ಳಿ ಕೇತ್ರದ ಶಾಸಕರಾಗಿದ್ದ ಆರ್‌. ಧ್ರುವನಾರಾಯಣರ ಒತ್ತಾಯದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರೇಷ್ಮೆ ಇಲಾಖೆಯಿಂದ ಪಡೆದು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಪಡಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸ‌ಲಾಗಿತ್ತು.

ರೇಷ್ಮೆ ಇಲಾಖೆ ನಿರ್ಲಕ್ಷ್ಯ: ನಂತರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಲಕ್ಷಾಂತರ ಹಣ ಖರ್ಚುಮಾಡಿ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು, ಬಿಸಿನೀರಿನ ವ್ಯವಸ್ಥೆಗೆ ಸೋಲಾರ್‌ ಅಳವಡಿಸಿರುವ ಬಗ್ಗೆ ದಾಖಲೆಗಳಿವೆ. ಕಳೆದ ಎರಡು ವರ್ಷದಿಂದ ವಸತಿ ಶಾಲೆಯನ್ನು ತೆರವುಗೊಳಿಸಿ ಪಕ್ಕದ ಉಮ್ಮತ್ತೂರು ಹೊರ ವಲಯದಲ್ಲಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.

ತಕ್ಷಣವೇ ಕಟ್ಟಡವನ್ನು ರೇಷ್ಮೆ ಇಲಾಖೆ ವಶಪಡಿಸಿಕೊಂಡು ರಕ್ಷಣೆ ಒದಗಿಸಬೇಕಾಗಿತ್ತು, ಆದರೆ ಈ ಕೆಲಸ ಮಾಡಲು ವಿಫ‌ಲವಾದ ಇಲಾಖೆ ಬೇಜವಾಬ್ದಾರಿತನದಿಂದ ಕಟ್ಟಡದಲ್ಲಿದ್ದ ಬೆಲೆಬಾಳುವ ಕಿಟಕಿ, ಬಾಗಿಲು ಮತ್ತು ವಿದ್ಯುತ್‌ ಸಂಪರ್ಕದ ವಸ್ತುಗಳು ಕಳ್ಳರ ಪಾಲಾಗಿದೇಯೋ ಅಥವಾ ಅಲ್ಲಿ ಕೆಲಸ ನಿರ್ವಸುತ್ತಿದ ಸಿಬ್ಬಂದಿ ಪಾಲಾಗಿದೆಯೋ ಎಂಬುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಏಳು ವರ್ಷ ವಿದ್ಯಾದಾನ: ಏಳು ವರ್ಷಗಳ ಕಾಲ ಈ ಕಟ್ಟಡದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಇಂದು ಆ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ ಕಟ್ಟಡ ಮಾತ್ರ ಅನಾಥವಾಗಿದೆ. ತಾಲೂಕು ಸಮಾಜ ಕಲ್ಯಾಣ ಇಲಾಖೆ ಈ ಕಟ್ಟಡದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ಕಟ್ಟಡಕ್ಕೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫ‌ಲರಾದ ಕಾರಣ ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ನಿವಾಸಿಗಳಿಗೆ ಮುಜುಗರ: ಸುತ್ತಮುತ್ತಲ ನಿವಾಸಿಗಳು ತುಂಬಾ ಮುಜುಗರದಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡವನ್ನು ಸಾರ್ವಜನಿಕರ ಕೆಲಸಕ್ಕಾಗಲಿ ಅಥವಾ ವಿಧ್ಯಾರ್ಥಿಗಳ ಅನುಕೂಲಕ್ಕೆ ಬಳಕೆ ಯಾಗಲಿ ಎಂಬುದು ಸ್ಥಳೀಯ ನಿವಾಸಿಗಳಾದ ಮೂರ್ತಿ, ಹಾಗು ನಾಗೇಂದ್ರ ಅವರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾ ಆಡಳಿತ ಈ ಕಟ್ಟಡವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಕೆ ಮಾಡಲು ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸರ್ಕಾರಿ ಆಸ್ತಿ ರಕ್ಷಣೆಯಾಗಲಿ: ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಗಳನ್ನು ಆಯುಕ್ತರ ಆದೇಶದ ಮೇರೆಗೆ ಸಮಾಜಕಲ್ಯಾಣ ಇಲಾಖೆಗೆ ಕಳೆದ 9 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಗೆ ಮೊರಾರ್ಜಿದೇಸಾಯಿ ವಸತಿ ಶಾಲೆ ನಡೆಸಲು ನೀಡಲಾಗಿತ್ತು ಆದರೆ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ನಮ್ಮ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರಿಸಿರುವುದಿಲ್ಲ, ಹಾಗಾಗಿ ರಕ್ಷಣೆ ನೀಡಿ ಸಾರ್ವಜನಿಕರ ಬಳಕೆಗೆ ಕಾನೂನು ತೊಡಕುಂಟಾಗಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಸಬೂಬು ನೀಡುತ್ತಾರೆ.

ಈಗಲಾದರೂ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಎರಡೂ ಕಟ್ಟಡಗಳನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳುವತ್ತ ಗಮನ ಹರಿಸಲಿ ಎಂಬುದು ವೆಂಕಟೇಶ, ಸುಂದರೇಶ ಸೇರಿದಂತೆ ಹಲವು ಸಾರ್ವಜನಿಕರ ಒತ್ತಾಸೆಯಾಗಿದೆ.

ರೇಷ್ಮೆ ಇಲಾಖೆ ವ್ಯಾಪ್ತಿಯ ಈ ಕಟ್ಟಡವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೇರೆಡೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ನಮ್ಮ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದನ್ನು ನಿರ್ಗತಿಕರ ಪುನರ್ವಸತಿ ಕೇಂದ್ರ ಸ್ಥಾಪಿಸುತ್ತೇವೆ ಎಂಬ ನೆಪವೊಡ್ಡಿನಮ್ಮ ಇಲಾಖೆಗೆ ಕಟ್ಟಡವನ್ನು ಹಸ್ತಾಂತರಿಸಿಲ್ಲ. ಹಾಗಾಗಿ ಈ ಕಟ್ಟಡವನ್ನು ಹಾಗೇ ಬಿಡಲಾಗಿದೆ.
-ಎಂ.ರೇಣುಕೇಶ್‌, ಸಹಾಯಕ ನಿದೇರ್ಶಕರು, ರೇಷ್ಮೆ ಇಲಾಖೆ , ಚಾಮರಾಜನಗರ

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next