ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯ ಸಂಭ್ರಮಿಸುವುದನ್ನು ಸಹಿಸಲಾಗದವರು ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಾರೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಆರೋಪಿಸಿದರು. ನಗರದ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ “ವಾಯ್ಸ ಎಗೆನೆಸ್ಟ್ ಸೈಲೆನ್ಸಿಂಗ್ ಡಿಸೆಂಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿರೂಪವಾಗಿದ್ದರು.
ಅವರು ಯಾರಿಗೂ ಮೋಸ ಮಾಡಿಲ್ಲ. ಯಾರ ಆಸ್ತಿ ಮೇಲೂ ಕಣ್ಣು ಹಾಕಿರಲಿಲ್ಲ. ಹೀಗಾಗಿ ಆಸ್ತಿ ವಿಚಾರವಾಗಿ ಅವರ ಲಕೊಲೆ ನಡೆದಿಲ್ಲ ಎಂದರು. ಸ್ವಾತಂತ್ರಾ ನಂತರದಲ್ಲಿ ಅಂಬೇಡ್ಕರ್ ವಿರುದ್ಧದ ಹೋರಾಟ ಸೇರಿೆ ಬಹುತೇಕ ಎಲ್ಲ ಹೋರಾಟಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೈವಾಡವಿತ್ತು. 1965, 1975 ಮತ್ತು ಗಾಂಧಿ ಹತ್ಯೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು. ಆದರೆ ಅವಕಾಶ ಉಪಯೋಗಿಸಿಕೊಂಡು ನಿಷೇಧ ತೆರವು ಮಾಡಿಸಿಕೊಂಡರು ಎಂದು ದೂರಿದರು.
ಹೈದರಾಬಾದ್‌ನ ಸಾಮಾಜಿಕ ಅಭಿವೃದ್ಧಿ ಮಂಡಳಿ ನಿರ್ದೇಶಕಿ ಕಲ್ಪನಾ ಕಣ್ಣಬೀರನ್ ಮಾತನಾಡಿ, ನಾನು ಗೌರಿ ಘೋಷಣೆ ಬದ್ಧತೆಯ ಸಂಕೇತವಾಗಿದೆ. ಗೌರಿ ತನ್ನ ಚಿಂತನೆಗೆ ತ್ಯಾಗದ ಮೂಲಕ ಶಕ್ತಿ ತುಂಬಿದ್ದಾಳೆ. ತುರ್ತು ಪರಿಸ್ಥಿತಿಗೂ ಭೀಕರವಾದ ಪರಿಸ್ಥಿತಿ ಇಂದು ದೇಶದಲ್ಲಿ ಉದ್ಭವಿಸಿದೆ. ಜನರ ಧ್ವನಿಯನ್ನು ಸಾವಿನ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.ಯಾರೂ ಕೂಡ ದೇಶದಲ್ಲಿ ಸುರಕ್ಷಿತವಾಗಿಲ್ಲ ಎಂದು ಟೀಕಿಸಿದರು.
ಸಿಪಿಐ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಸಿದ್ಧನಗೌಡ ಪಾಟೀಲ ಮಾತನಾಡಿ, ದಯವೇ ಧರ್ಮ ಎಂಬುದು ಈಗಿಲ್ಲ. ಧಮನವೇ ಧರ್ಮದ ಮೂಲವಾಗಿದೆ. ವ್ಯಕ್ತಿಯನ್ನು ಸದೆಬಡಿದು ವ್ಯಕ್ತಿತ್ವದ ಧಮನ ಸಾಧ್ಯವಿಲ್ಲ. ಗೌರಿಯನ್ನು ಹತ್ಯೆ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಆದರೆ, ಆ ಶಕ್ರಿ ಯಾವುದು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಮಣಿಪುರದ ಹೋರಾಟಗಾರ್ತಿ ಐರೋಮ್ ಶರ್ಮಿಳಾ, ವಕೀಲರಾದ ಶ್ರೀನಿವಾಸ ಬಾಬು, ಬಿ.ಟಿ.ವೆಂಕಟೇಶ್, ಎಚ್. ಶಂಕರಪ್ಪ ಮೊದಲಾದವರು ಉಪಸ್ಥಿತರಿದ್ದರು.
ದೇಶದ ಇಂದಿನ ಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ. ಪ್ರಜಾಪ್ರಭುತ್ವ ಹಾಗೂ ಜನಹಿತದ ತತ್ವಕ್ಕೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ. ಚಳವಳಿಗಳಲ್ಲಿ ಯುವ ಪೀಳಿಗೆ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು.
-ಐರೋಮ್ ಶರ್ಮಿಳಾ, ಹೋರಾಟಗಾರ್ತಿ