Advertisement

“ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದಂತಾಯಿತು’

10:14 PM May 31, 2020 | Sriram |

ಕುಂದಾಪುರ: ಕೋವಿಡ್‌- 19 ಸೇವೆಗೆ ಆಹ್ವಾನಿಸಿದಾಗ ನಾನು ಹೆದರಿದ್ದೆ. ಎಷ್ಟೋ ಮಂದಿ ಕೋವಿಡ್‌-19 ಇದೆ, ಕರ್ತವ್ಯಕ್ಕೆ ಹೋಗಬೇಡ ಎಂದು ಹೆದರಿಸಿದ್ದರು. ಆದರೆ ನಾನು ಗಟ್ಟಿಮನಸ್ಸು ಮಾಡಿ ಇಲ್ಲಿ ಸೇವೆಗೆ ಸೇರಿದೆ.

Advertisement

ಸಿದ್ದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತಾಳ್ಮೆ ಕಡಿಮೆಯಿತ್ತು. ವೈದ್ಯರಿಂದ, ಶುಶ್ರೂಷಕಿಯರಿಂದ ತಾಳ್ಮೆಯನ್ನು ಕಲಿತೆ. ಕೋವಿಡ್‌- 19 ಪೀಡಿತರ ಸೇವೆ ಮಾಡುವ ಮೂಲಕ ನನಗೆ ದೇವರ ಸೇವೆ ಮಾಡಲು ಅವಕಾಶ ದೊರೆತಂತಾಯಿತು. ಇದು ನನ್ನ ಜೀವನದ ಭಾಗ್ಯವೇ ಸರಿ. ಹೀಗಂತ ಹೇಳುತ್ತಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡವರು ಕೋವಿಡ್‌-19 ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್‌ ಮಂಜುಳಾ ಅವರು.

ರವಿವಾರ ಮೊದಲ ತಂಡದ 14 ಮಂದಿ ಗುಣಮುಖರಾಗಿ ಬಿಡುಗಡೆಯಾದಾಗ ಈ ಆಸ್ಪತ್ರೆಯ ಕೋವಿಡ್‌- 19 ವಾರಿಯ ರ್ಸ್‌ಗಳ ಮುಖದಲ್ಲಿ ಹರ್ಷ ತಾಂಡವವಾಡುತ್ತಿತ್ತು. ಹಿರಿಯ ಅಧಿಕಾರಿಗಳು ಗುಣಮುಖರಾದವರಿಗೆ ಹೂವು, ಹೂಗಿಡ, ಮಕ್ಕಳಿಗೆ ಚಾಕಲೇಟ್‌ ನೀಡಿ ಅಭಿನಂದಿಸುತ್ತಿದ್ದರೆ ಅಲ್ಲಿ ಸೇರಿದ್ದ ಅಷ್ಟೂ ಮಂದಿ ಸಿಬಂದಿ ಚಪ್ಪಾಳೆ ಮೂಲಕ ಜೀವನೋಲ್ಲಾಸ ಹೆಚ್ಚಿಸುತ್ತಿದ್ದರು.

ಮೊದಲು ಮಾತ್ರೆಗಳನ್ನು ಸೇವಿಸಿಯೇ ಸೇವೆಗೆ ತೆರಳುತ್ತಿದ್ದೆವು. ಅನಂತರ ಭಯವೆಲ್ಲ ಹೊರಟು ಹೋಯಿತು. ಯಾವುದೇ ಭಯವಿಲ್ಲದೆ ಕೆಲಸ ಮಾಡುವುದು ಅಭ್ಯಾಸವಾಯಿತು ಎನ್ನುತ್ತಾರೆ ದಾದಿ ಸುರೇಖಾ.

ಗುಣಮುಖರಾಗಿ ಬಂದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ರೋಗದ ಕುರಿತಾಗಿ ಭಯ ಬೇಡ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತಿದೆ. ಈ ನಿಟ್ಟಿನಲ್ಲಿ ಕೂಡಾ ಆತಂಕ ಅನಗತ್ಯ ಎಂದು ಪ್ರತಿಕ್ರಿಯಿಸಿದರು.

Advertisement

ಸಹಾಯಕ ಕಮಿಷನರ್‌ ಕೆ. ರಾಜು, ಇಲ್ಲಿನ ಆಸ್ಪತ್ರೆಯಲ್ಲಿ 78 ಜನರ ಪೈಕಿ 14 ಮಂದಿಯ ವರದಿ ನೆಗೆಟಿವ್‌ ಬಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವೈಯಕ್ತಿಕ ಅಂತರ ಕಾಪಾಡುವುದೂ ಸೇರಿದಂತೆ ಕೋವಿಡ್‌- 19 ಹರಡುವುದನ್ನು ತಡೆಗಟ್ಟಲು ಪ್ರಯತ್ನಗಳು ಮುಂದುವರಿಯಲಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ, ಜಿಲ್ಲೆಯಲ್ಲಿ 175 ಪ್ರಕರಣಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು ಜನರಿಗೆ ಚಿಕಿತ್ಸೆ ಕುರಿತು ಆತಂಕ ಅನಗತ್ಯ. ಎಷ್ಟೇ ಪ್ರಕರಣ ಬಂದರೂ ಜಿಲ್ಲೆಯಲ್ಲಿ ಸಮರ್ಥವಾಗಿ ಎದುರಿಸಲು ವೈದ್ಯಕೀಯ ತಂಡ ಸದಾ ಸಿದ್ಧವಿದೆ. ಜನರು ಭಯಪಡಬೇಕಿಲ್ಲ, ಆದರೆ ಮುಂಜಾಗೃತ ಕ್ರಮ ವಹಿಸಿ ಸಮುದಾಯಕ್ಕೆ ಹರಡದಂತೆ ತಡೆಯಬೇಕು ಎಂದರು.

ಕೋವಿಡ್‌-19 ಜಿಲ್ಲಾ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಕೋವಿಡ್‌ ಸಂಬಂಧ ಅಭಿಯಾನ ನಡೆಯುತ್ತಿದೆ. ಬೇರೆ ರಾಜ್ಯಗಳಿಂದ ಬಂದವರಿಗೆ ತಪಾಸಣೆ ನಡೆಸಿ ಅವರನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಜಿಲ್ಲೆಯ 13 ಲಕ್ಷ ಜನರಿಗೆ ಸೋಂಕು ತಗಲದಂತೆ ಪ್ರಯತ್ನ ಮಾಡಿದೆ. ಶನಿವಾರದ ವರೆಗೆ 50, ರವಿವಾರ 14 ಗುಣಮುಖರಾಗಿದ್ದು ಮೊದಲೇ ಆತಂಕವಿದ್ದ ಒಂದು ಪ್ರಕರಣದಲ್ಲಿ ಮಾತ್ರ ಸಾವು ಸಂಭವಿಸಿದೆ. ಉಡುಪಿ ಟಿಎಂಎಪೈ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು ನಂತರದ ದಿನಗಳಲ್ಲಿ ಹೊರರಾಜ್ಯಗಳಿಂದ ಬರುವವರಲ್ಲಿ ಸೋಂಕು ಲಕ್ಷಣ ಹೆಚ್ಚಾಗಿ ಕಂಡುಬಂದ ಕಾರಣ ಕುಂದಾಪುರ, ಕಾರ್ಕಳದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈದ್ಯರು, ವೈದ್ಯಕೀಯ ಸಿಬಂದಿಯ ಅವಿರತ ಪರಿಶ್ರಮದಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದರು.

ಮೊದಲ ಸರಕಾರಿ ಆಸ್ಪತ್ರೆ
ಕೋವಿಡ್‌ 19ಗೆ ಚಿಕಿತ್ಸೆ ನೀಡಿ ಪಾಸಿಟಿವ್‌ ಬಂದವರನ್ನು ಗುಣಮುಖರಾಗಿಸಿ ಕಳುಹಿಸಿದ ಜಿಲ್ಲೆಯ ಮೊದಲ ಸರಕಾರಿ ಆಸ್ಪತ್ರೆ ಇದಾಗಿದೆ. ಹೊರರಾಜ್ಯಗಳಿಂದ ಆಗಮಿಸಿದ ಕುಂದಾಪುರ ತಾ|ನ ವಿವಿಧೆಡೆಯ ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದರು.

ಸದಾ ಎಚ್ಚರ ವಹಿಸಿ
ಕ್ವಾರಂಟೈನ್‌ನಿಂದ ಬಿಡುಗಡೆಗೊಂಡವರು, ಗಂಟಲ ದ್ರವ ವರದಿ ಬಾರದೇ ಇದ್ದವರು ಅನವಶ್ಯಕವಾಗಿ ಸುತ್ತಾಡಿ ಒಂದೊಮ್ಮೆ ಸೋಂಕು ಇದ್ದರೆ ಅದು ಹರಡಲು ಕಾರಣವಾಗಬೇಡಿ. ಹೋಂ ಕ್ವಾರಂಟೈನ್‌ ವಿಧಿಸಿದ್ದರೆ ಕಟ್ಟುನಿಟ್ಟಾಗಿ ಪಾಲಿಸಿ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ನಿಯಮಗಳನ್ನು ಪಾಲಿಸಿ.
– ಹರೀಶ್‌ ಆರ್‌. ನಾಯ್ಕ,
ಎಸ್‌ಐ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next