ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಮ್ಮ ಚಾತುರ್ಮಾಸ್ಯವನ್ನು ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದಲ್ಲಿ ಹಮ್ಮಿಕೊಂಡಿದ್ದಾರೆ.
ಈ ಬಾರಿಯ ಚಾತುರ್ಮಾಸ್ಯವನ್ನು ಗೋಸೇವೆಗಾಗಿ ಮೀಸಲಿಟ್ಟಿದ್ದು, ಜು.27ರಿಂದ ಬಾನ್ಕುಳಿಯಲ್ಲಿ ಗೋಸ್ವರ್ಗ-ಚಾತುರ್ಮಾಸ್ಯ ಹಮ್ಮಿಕೊಂಡಿರುವುದಾಗಿ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಹಂಪಿನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಜು.27ರಿಂದ ಸೆ.25ರವರೆಗೆ 25ನೇ ಚಾತುರ್ಮಾಸ್ಯ ನಡೆಯಲಿದೆ. ರಾಮಚಂದ್ರಪುರ ಮಠದ ಮೂಲ ಮಠದಲ್ಲಿ ನಿರ್ಮಿಸಿರುವ ಗೋ ಸ್ವರ್ಗದಲ್ಲಿ ನಡೆಯುವ ಚಾತುರ್ಮಾಸ್ಯಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಪ್ರತಿ ದಿನವೂ ಕಾಮಧೇನು ಹವನ, ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಭಜನ ರಾಮಾಯಣ ಪಠಣ, ಸ್ವರ್ಗ ಸಮ್ಮಾನ, ಶ್ರೀಮದ್ಭಾಗವತ ಪ್ರವಚನ, ಕಲೋಪಾಸನೆ, ಗೋಗಂಗಾರತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದ ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಗೋ ಸ್ವರ್ಗದಲ್ಲಿ ಒಂದು ಸಾವಿರಕ್ಕೂ ಅಧಿಕ ದೇಸಿ ತಳಿ ಹಸುಗಳಿವೆ. ಅಲ್ಲಿರುವ ಗೋವುಗಳು ತಮಗೆ ಬೇಕಾದ ಸಮಯದಲ್ಲಿ ತಮಗೆ ಬೇಕಾದ ಆಹಾರ ತಿನ್ನಬಹುದು. ಗೋವುಗಳ ವಿಶ್ರಾಂತಿಗಾಗಿ ಗೋವಿರಾಮ ಮಂಟಪ, ಮೇವುಗಳ ಸಂಗ್ರಹಣೆ, ಗೋ ಉತ್ಪನ್ನ ಇತ್ಯಾದಿ ಎಲ್ಲವೂ ಲಭ್ಯವಿದೆ. ಈ ಬಾರಿ ಆ ಗೋವುಗಳ ಮಧ್ಯೆಯೇ ಚಾತುರ್ಮಾಸ್ಯ ಹಮ್ಮಿಕೊಂಡಿದ್ದೇನೆ ಎಂದರು.
ಚಾತುರ್ಮಾಸ್ಯದಲ್ಲಿ ವ್ಯಾಸಪೂಜೆ, ಚಾತುರ್ಮಾಸ್ಯ ವ್ರತಸಂಕಲ್ಪ, ರಾಷ್ಟ್ರೀಯ ಗವ್ಯ ಸಮ್ಮೇಳನ, ಸ್ವರ್ಗಸಂಗೀತ ಸಂಭ್ರಮ, ಸ್ವರ್ಗಯಕ್ಷ ಸಂಭ್ರಮ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಹಾಗೂ ಸೀಮೋಲ್ಲಂಘನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಜನರು ಮತ್ತು ಗೋವುಗಳನ್ನು ಸಂಪರ್ಕಿಸುವ ಕೆಲಸ ಇದಾಗಿದೆ ಎಂದು ಹೇಳಿದರು.
ಚಾತುರ್ಮಾಸ್ಯದ ಮೂಲಕ ಮಾನವೀಯ ಅನುಕಂಪದ ಗೋ ಸ್ವರ್ಗ ಯೋಜನೆಯನ್ನು ಜನರಿಗೆ ಪರಿಚಯಿಸುವ ಕಾರ್ಯ ನಡೆಯಲಿದೆ. ಹಾಗೆಯೇ ನವೆಂಬರ್ ತಿಂಗಳಲ್ಲಿ ಗೋ ಸ್ವರ್ಗದಲ್ಲಿ ಗೋ ನವರಾತ್ರಿ ಆಯೋಜಿಸಲಿದ್ದೇವೆ. ಗೋ ಜಪದ ಜತೆಗೆ ಗೋ ಪೂಜೆ ಇರಲಿದೆ.
-ರಾಘವೇಶ್ವರ ಭಾರತೀ ಸ್ವಾಮೀಜಿ