Advertisement

ರಾಜಕೀಯಕ್ಕೆ ಮಠ, ಶ್ರೀಗಳನ್ನು ಎಳೆದು ತರಬೇಡಿ: ಅಶೋಕ್‌

12:42 AM Apr 13, 2024 | Team Udayavani |

ಬೆಂಗಳೂರು: ಮಂಡ್ಯದಲ್ಲಿ ಹೀನಾಯ ಸೋಲಾಗುವ ಸುಳಿವು ಸಿಗುತ್ತದ್ದಂತೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಚಿವ ಚಲುವರಾಯಸ್ವಾಮಿ ಅವರು ಆದಿಚುಂಚನಗಿರಿ ಮಠವನ್ನು, ಸ್ವಾಮಿಗಳನ್ನು ರಾಜಕೀಯಕ್ಕೆ ಎಳೆದು ತಂದು ಗೊಂದಲ ಸೃಷ್ಟಿ ಮಾಡುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದಿದ್ದಾರೆ.

Advertisement

ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಅವರು, ಚಲುವರಾಯಸ್ವಾಮಿ ಅವರೇ, ಮಠಗಳೆಂದರೆ ಅದು ಸಮಾಜಕ್ಕೆ ಸನ್ಮಾರ್ಗ ತೋರುವ ಆಧ್ಯಾತ್ಮಿಕ ಕೇಂದ್ರಗಳು. ಬಡ ಬಗ್ಗರಿಗೆ ಅನ್ನ, ಅಕ್ಷರ, ಆಶ್ರಯ, ಆರೋಗ್ಯದ ದಾಸೋಹ ನೀಡುವ ಸೇವಾ ಕೇಂದ್ರಗಳು. ಮಸೀದಿಗಳು, ಮದರಸಾಗಳು, ಮೌಲ್ವಿಗಳನ್ನು ಬಳಸಿ ಕೊಂಡು ಮತ ಬ್ಯಾಂಕ್‌ ಗ್ಯಾರಂಟಿ ಮಾಡಿಕೊಳ್ಳುವ ರಾಜಕಾರಣಕ್ಕೆ ಒಗ್ಗಿಕೊಂಡಿರುವ ಕಾಂಗ್ರೆಸ್ಸಿನ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುವುದು ಸಹಜ ಎಂದಿದ್ದಾರೆ.

ಆದಿಚುಂಚನಗಿರಿ ಶ್ರೀ ಸಹಿತ 48 ಜನರ ದೂರವಾಣಿ ಕದ್ದಾಲಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಪರಿಮಿತಿಯಲ್ಲಿ ಯಾರಿಗೂ ಅನುಮತಿ ಕೊಟ್ಟಿರಲಿಲ್ಲ. ಅನಧಿಕೃತವಾಗಿ ಮಾಡಿದ್ದರೆ ಗೊತ್ತಿಲ್ಲ. ಚಲುವರಾಯಸ್ವಾಮಿ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ಇನ್ನು ರಾಜಕೀಯಕ್ಕೆ ಮಠಾಧೀಶರು ಬರಬಾರದೆಂಬ ನಿಷೇಧವೇನೂ ಇಲ್ಲ.
-ಡಾ| ಜಿ. ಪರಮೇಶ್ವರ್‌, ಗೃಹಸಚಿವ

ಅಶೋಕ್‌ ವಿರುದ್ಧ ಕಾಂಗ್ರೆಸ್‌ ದೂರು
ಬೆಂಗಳೂರು: ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಆದಿಚುಂಚನಗಿರಿ ಮಠದ ಭಕ್ತರ ಮೇಲೆ ಪ್ರಭಾವ ಬೀರುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಶುಕ್ರವಾರ ಚುನಾವಣ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳೊಂದಿಗೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಅಶೋಕ್‌ ಅವರು ಬಂದಿರುವಂತಹ ಅಭ್ಯರ್ಥಿಗಳೆಲ್ಲ ಮತ್ತೂಮ್ಮೆ ಜಯಶೀಲರಾಗಿ ಮತ್ತೆ ಮಠಕ್ಕೆ ಬನ್ನಿ ಅಂತ ಸ್ವಾಮೀಜಿ ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದ ಸಿಕ್ಕ ಮೇಲೆ ಇವರೆಲ್ಲರೂ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಮಠದ ಭಕ್ತರ ಮೇಲೆ ಪ್ರಭಾವ ಬೀರುವಂತಹ ಹೇಳಿಕೆ ಇದಾಗಿದ್ದು, ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next