ಸಿನಿಮಾಗಳಲ್ಲಿ ಡ್ರಗ್ಸ್ ವಿಷಯ ಕಾಮನ್. ಆದರೆ, ಅದೇ ಹೈಲೆಟ್ ಆಗಿರುವುದಿಲ್ಲ. ಆದರೆ, ಈ ಹಿಂದೆ ಬಾಲಿವುಡ್‌ನಲ್ಲಿ “ಡ್ರಗ್ಸ್’ ವಿಷಯವನ್ನೇ ಕೇಂದ್ರವಾಗಿಟ್ಟುಕೊಂಡು “ಉಡ್ತಾ ಪಂಜಾಬ್’ ಎಂಬ ಚಿತ್ರ ಬಂದಿತ್ತು. ಅದು ಸಿಕ್ಕಾಪಟ್ಟೆ ವಿವಾದಕ್ಕೂ ಕಾರಣವಾಗಿತ್ತು. ಇತ್ತೀಚೆಗೆ ಸದನದಲ್ಲೂ ಆ ಡ್ರಗ್ಸ್ ವಿಷಯವೇ ಪ್ರಸ್ತಾಪವಾಗಿತ್ತು. ಎಲ್ಲಾ ಸರಿ, ಈಗ ಯಾಕೆ ಆ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈಗ ಕನ್ನಡ ಚಿತ್ರವೊಂದರಲ್ಲೂ ಅಂಥದ್ದೊಂದು ಡ್ರಗ್ಸ್ ಮಾಫಿಯಾ ವಿಷಯ ಪ್ರಸ್ತಾಪವಾಗುತ್ತಿದೆ. ಹೌದು, “ಗೋಸಿ ಗ್ಯಾಂಗ್’ ಎಂಬ ಚಿತ್ರ ಡ್ರಗ್ಸ್ ಮಾಫಿಯಾ ಸುತ್ತ ಸುತ್ತುತ್ತದೆ ಎಂಬುದು ವಿಶೇಷ.
ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯತಿರಾಜ್ ಜಗ್ಗೇಶ್ ಹಾಗು ಅಜಯ್ ಕಾರ್ತಿಕ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಅಜಯ್ ಕಾರ್ತಿಕ್‌ಗೆ ಇದು ಮೊದಲ ಸಿನಿಮಾ. ಈ ಚಿತ್ರವನ್ನು ಕೆ.ಶಿವಕುಮಾರ್ ನಿರ್ಮಿಸಿದ್ದಾರೆ. ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ.
“ಗೋಸಿ ಗ್ಯಾಂಗ್’ ಅಂದಾಕ್ಷಣ, ಅದೊಂದು ಆ್ಯಕ್ಷನ್ ಚಿತ್ರವೋ ಅಥವಾ ಪುಡಾರಿಗಳ ಚಿತ್ರವೋ ಇರಬೇಕು ಎಂಬ ಪ್ರಶ್ನೆ ಎದುರಾಗುತ್ತೆ. ಇಲ್ಲಿ ಆ್ಯಕ್ಷನ್ ಇದೆ, ಪುಡಾರಿಗಳೂ ಇದ್ದಾರೆ. ಎಲ್ಲದರ ಜೊತೆಗೆ ಮುಗ್ಧ ಮನಸ್ಸುಗಳೂ ಇವೆ. ಅವೆಲ್ಲದರ ತಲ್ಲಣ ಈ ಚಿತ್ರಣದಲ್ಲಿದೆ. “ಗೋಸಿ ಗ್ಯಾಂಗ್’ ಅಂದರೆ, ಅದೊಂದು ಹುಡುಗರ ನಡುವಿನ ಪದ. ಪುಟಗೋಸಿ, ಗೋಸಿ ಪದಗಳು ಸಾಮಾನ್ಯವಾಗಿವೆ. ಅಂಥದ್ದೇ “ಗೋಸಿ ಗ್ಯಾಂಗ್’ ಎಂಬ ಪದ ಇಟ್ಟುಕೊಂಡು ಚಿತ್ರ ಮಾಡಲಾಗಿದೆ.
ಕೇವಲವಾಗಿ ಕಾಣುವ, ನೋಡುವ ಮಂದಿಗೆ “ಗೋಸಿ ಗ್ಯಾಂಗ್’ ಎಂಬ ಪಟ್ಟ ಸಿಗುತ್ತೆ. ಅಂಥದ್ದೇ ಕಥಾಹಂದರ ಇಲ್ಲಿದ್ದು, ಇಲ್ಲಿ ಯುವಕರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿ ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ. ಅಂಥದ್ದೊಂದು ಮಾಫಿಯಾ ಹೇಗೆ ನಡೆಯುತ್ತೆ, ಯಾರೆಲ್ಲಾ ಇರುತ್ತಾರೆ ಎಂಬುದು ಚಿತ್ರದ ಹೈಲೆಟ್.
ಇಲ್ಲೊಂದು ಸಂದೇಶವೂ ಇದೆ. ಇದು ಯೂಥ್ ಚಿತ್ರವಾಗಿದ್ದರೂ ಪ್ರೀತಿ, ಗೀತಿ ಇತ್ಯಾದಿ ಇಲ್ಲ. ಆದರೆ, ಒಂಚೂರು ಕಾಮಿಡಿಯೊಂದಿಗೆ ಅಲ್ಲಲ್ಲಿ ಕ್ರಷ್ ಆಗುವಂತಹ ಅಂಶಗಳು ಇಲ್ಲಿರಲಿವೆ. ಎಸ್ಸೆಸ್ಸೆಲ್ಸಿ ಪಾಸ್ ಆದ ಹುಡುಗರು, ಹಳ್ಳಿಯಿಂದ ಸಿಟಿಗೆ ಬಂದಾಗ, ಅವರಲ್ಲಿ ಆಗುವ ಬದಲಾವಣೆಗಳು, ಸಿಟಿ ಹುಡುಗಿಯರನ್ನು ನೋಡಿದಾಗ ಆಗುವಂತಹ ಆಕರ್ಷಣೆ ಮತ್ತು ಗೊತ್ತಿಲ್ಲದೆಯೇ ಮಾಫಿಯಾದಲ್ಲಿ ಸಿಲುಕಿಕೊಳ್ಳುವ ಸಂದರ್ಭಗಳು ಚಿತ್ರದಲ್ಲಿವೆ. ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣ ಮಾಡಿದ್ದಾರೆ. ಆರವ್ ಸಂಗೀತವಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ.