Advertisement

ವೈಭವದ ರಂಗನಾಥಸ್ವಾಮಿ ರಥೋತ್ಸವ

03:52 PM Jan 18, 2018 | Team Udayavani |

ಹಾರನಹಳ್ಳಿ: ಇಲ್ಲಿಗೆ ಸಮೀಪದ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಬುಧವಾರ 3 ಗಂಟೆಗೆ ಶುಭಲಗ್ನದಲ್ಲಿ ನೆರವೇರಿತು. ಕಳೆದ 5 ದಿನಗಳಿಂದ ಜಾತ್ರೆ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಗುತ್ತಿನಕೆರೆ ಗ್ರಾಮ ಹಸಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು.

Advertisement

ಸ್ವಾಮಿಯವರಿಗೆ ಬೆಳಗಿನಿಂದಲೇ ವಿಶೇಷ ಪೂಜೆ ನೆರವೇರಿದವು. ನಂತರ ಮೂಡಲಗಿರಿ ತಿಮ್ಮಪ್ಪ ಸ್ವಾಮಿ, ಯಳವಾರೆ ಹುಚ್ಚಮ್ಮದೇವಿ. ಹಾರ್ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರುಗಳ ತಳಲೂರು ಬನ್ನಿಮಹಾಕಾಳಿ ಅಮ್ಮನವರ ಸಮ್ಮುಖದಲ್ಲಿ ಶ್ರೀ ರಂಗನಾಥಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆತಂದು, ರಥಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ರಥೋತ್ಸವಕ್ಕೆ ಚಾಲನೆ: ನಂತರ ಬಣ್ಣ ಬಣ್ಣದ ಬಟ್ಟೆಗಳಿಂದ, ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಕುಳ್ಳರಿಸಲಾಯಿತು. ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳನ್ನು ಪೂರೈಸಿದ ನಂತರ, ಧೂತರಾಯಸ್ವಾಮಿ, ಚಲುವರಾಯಸ್ವಾಮಿ ಹಾಗೂ ಭಕ್ತರು ರಥದಗಾಲಿಗೆ ತೆಂಗಿನಕಾಯಿಗಳನ್ನು ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು. 

ನೆರೆದಿದ್ದ ಭಕ್ತರು ಶ್ರೀರಂಗ ನಾಮಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆದರು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಹೂವು ತೂರಿದರು. ಆಕಾಶದಲ್ಲಿ ಗರುಡ ರಥಕ್ಕೆ ಪ್ರದಕ್ಷಿಣೆ ಮಾಡಿದ ದೃಶ್ಯ ನೋಡಿದ ಭಕ್ತರಿಗೆ ಸಾಕ್ಷಾತ್‌ ರಂಗನೇ ದರ್ಶನ ನೀಡಿದ್ದಾನೆಂಬಂತೆ ಕೈಮುಗಿದರು. 

ಉಯ್ನಾಲೆ ಉತ್ಸವ: ರಥೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಪಾನಕ ಫ‌ಲಾಹಾರ ನೀಡಲಾಯಿತು. ನಂತರ ವಸಂತೋತ್ಸವ ಮತ್ತು ಮಣೇವು ಸೇವೆ, ಮಹಾಮಂಗಳಾರತಿ ನೆರವೇರಿದವು. ಸಂಜೆ ಗಂಗಾಸ್ನಾನದ ನಂತರ ಶ್ರೀಯವರಿಗೆ ಉಯ್ನಾಲೆ ಉತ್ಸವ ಏರ್ಪಡಿಸಲಾಗಿತ್ತು. ಜಾತ್ರೆ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿನಕೆರೆ ಜಾತ್ರಾ ಮಹೋತ್ಸವದ ಸಮಿತಿ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು, ರಾಜಕೀಯ ಮುಖಂಡರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರು ಇದ್ದರು. 

Advertisement

ಕುಣಿತಕ್ಕೆ ಮೆರುಗು: ಜಾತ್ರೆಯಲ್ಲಿ ಧೂತರಾಯಸ್ವಾಮಿ, ಚಲುವರಾಯಸ್ವಾಮಿ ದೇವರ ಸೋಮನಕುಣಿತ, ಕುಣಿತಕ್ಕೆ
ಹಾರನಹಳ್ಳಿ ಜೇನುಕಲ್ಲಯ್ಯ, ಎಚ್‌.ಇ.ಈರಪ್ಪ, ದೊಣ್ಣುವಾದ್ಯ, ಪನ್ನಸಮುದ್ರ ಕುಮಾರ್‌, ಹಾರನಹಳ್ಳಿ ಅರೆ ರಂಗಸ್ವಾಮಿಯವರ ಕರಡೆ, ಅರೆವಾದ್ಯ, ವಾಲಗ ಕುಣಿತಕ್ಕೆ ಮೆರಗು ನೀಡಿತ್ತು. ಸಾವಿರಾರು ಭಕ್ತರು ದೇವರ ಕುಣಿತ ನೋಡಿ ಆನಂದಿಸಿದರು. 

ಶ್ರೀ ರಂಗನಾಥಸ್ವಾಮಿ ಮೂಲ ಸನ್ನಿಧಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಾವಿರಾರು
ಭಕ್ತರು ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ನಾಳೆ ರಾತ್ರಿ 9 ಗಂಟೆಗೆ ಕೆಂಚಪ್ಪಸ್ವಾಮಿ ಸೇವೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next