Advertisement

ಗೋರೆಗಾಂವ್‌ ಕರ್ನಾಟಕ ಸಂಘದ 60ನೇ ನಾಡಹಬ್ಬ ಸಂಭ್ರಮ

04:34 PM Mar 21, 2018 | |

ಮುಂಬಯಿ: “ಭಾರತದ ಬಹುತ್ವದ ನೆಲೆಗಳು’ ಇದೊಂದು ಒಳ್ಳೆಯ ವಿಷಯ. ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವೂ ಹೌದು. ಆದರೆ ಬಹುತ್ವ ಅಂದರೆ ಅದೊಂದು ಪರಿಕಲ್ಪನೆಯಾಗಿದೆ. ನಮ್ಮಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳು ಅತಿಯಾಗಿ ತಾಂಡವವಾಡುತ್ತಿದ್ದು, ವಾಸ್ತವಿಕವಾಗಿ ಇಂದು ಬಹುತ್ವ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನಾವು ಬಹುತ್ವದ ಬಗ್ಗೆ ಸಾಂವಿಧಾನಿಕವಾಗಿ ಮಾತ್ರ ಮಾತನಾಡುತ್ತಿದ್ದರೂ ಸ್ವಾರ್ಥ ಮನೋಭಾವಿಗಳಾಗಿ ಕೌಟುಂಬಿಕವಾಗಿ ಕೂಡು ಕುಟುಂಬದಿಂದ ದೂರ ಸರಿದು ಚಿಕ್ಕ ಸಂಸಾರವಾಗಿ ಬಾಳುವುದರಿಂದ ಬಹುತ್ವ ಅರ್ಥವನ್ನು ಕಳೆದುಕೊಂಡಿದೆ. ಬರೇ ಮನೆಯೊಳಗಿನ ಮಾತಾಗಿ, ಬರೇ ನುಡಿಯಾಗಿ ಬಹುತ್ವ ಕಾಣುತ್ತಾ ನಡೆಯಲ್ಲಿ ಹಿನ್ನಡೆಯಾಗಿ ಉಳಿದಿದೆ    ಎಂದು ನಿವೃತ್ತ ಪ್ರಾಚಾರ್ಯ ಮತ್ತು ಪ್ರಸಿದ್ಧ ಸಾಹಿತಿ ಡಾ| ವಿಶ್ವನಾಥ ಕಾರ್ನಾಡ್‌ ಇವರು ನುಡಿದರು.

Advertisement

ಮಾ. 18ರಂದು  ಪೂರ್ವಾಹ್ನ ಮಲಾಡ್‌ ಪಶ್ಚಿಮ ಬಜಾಜ್‌ ಸಭಾಗೃಹದಲ್ಲಿ ಗೋರೆಗಾಂವ್‌ ಕರ್ನಾಟಕ ಸಂಘವು ಸಂಘದ ಮಾಜಿ ಅಧ್ಯಕ್ಷ ರವಿ ರಾ. ಅಂಚನ್‌ ಇವರ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ್ದ 60ನೇ ವಾರ್ಷಿಕ ನಾಡಹಬ್ಬ ಸಂಭ್ರಮದಲ್ಲಿ “ಭಾರತದ ಬಹುತ್ವದ ನೆಲೆಗಳು’ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಬಹುತ್ವದ ನೆಲೆಯನ್ನು ಮುಂದಿಟ್ಟು ನಮ್ಮನ್ನು ಆಟವಾಡಿಸುತ್ತಾ ಜಾತ್ಯತೀತರೆನಿಸಿ ಜಾತೀಕರಣದ ಮೂಲಕ ಮತಯಾಚನಾ ಅಸ್ತ್ರಕ್ಕೆ ಮುಂದಾಗಿರುವುದರಿಂದ ಬಹುತ್ವದ ನೆಲೆಯು ಅಲುಗಾಡುವಂತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

“ಧಾರ್ಮಿಕ ನೆಲೆಗಳು’  ಎಂಬ ವಿಷಯದಲ್ಲಿ ಪತ್ರಕರ್ತ, ಕವಿ ಗೋಪಾಲ್‌ ತ್ರಾಸಿ ಇವರು ಉಪನ್ಯಾಸ ನೀಡಿ, ಎಲ್ಲರಿಗೂ ಧರ್ಮಗಳ ಆಯ್ಕೆಯ ಸ್ವಾತಂತ್ರ್ಯವಿದೆ. ಉದಾತ್ತವಾದ ಆಶಯವಿದೆ. ಎಲ್ಲಾ ಧರ್ಮದೊಳಗೆ ವ್ಯಕ್ತಿಗತವಾದ ಸ್ವಾತಂತ್ರ್ಯವಿದೆ.  ಸಂವಿಧಾನದ ಮೂಲ ಆಶಯದಲ್ಲಿ ಸಮಾನತೆ, ಅಂತಃಸತ್ವ, ಅಂತರ್ಗತವಾಗಿದೆ. ಪ್ರತಿ ಜಾತಿ ಮತ್ತು ಧರ್ಮದವರು ಕಾನೂನಿನ ಪ್ರಕಾರ ಸಮಾನ ನೆಲೆಯಲ್ಲಿ ಪರಿಗಣಿಸುವವರು. ಗಾಂಧೀಜಿಯ ಧೋರಣೆ ದಲಿತರೊಳಗೊಂಡು ಸಮಗ್ರ ಸಮಾಜದ ಸರ್ವೋದಯದ,  ಸಮಜೀವನದ  ಕನಸು ಆಗಿದ್ದರೆ, ಗಾಂಧೀಜಿಗೆ ಸ್ವಾತಂತ್ರÂದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ಮಹದಾಸೆಯಿತ್ತು.  ಆದರೆ ಈ ದೇಶದ ಬಹುಪಾಲು ದಲಿತ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ  ಅಂದ‌ ಮೇಲೆ ಸರ್ವೋದಯ ಹೇಗೆ ಸಾಧ್ಯ ಎಂಬ ಅನುಮಾನ ಮತ್ತು ಸಂಶಯ ಡಾ| ಅಂಬೇಡ್ಕರ್‌ ಅವರದ್ದಾಗಿತ್ತು ಎಂದರು.

“ಸಾಮಾಜಿಕ ನೆಲೆಗಳು’  ಎಂಬ ವಿಷಯದಲ್ಲಿ ಜಿ. ನಾಗರತ್ನಾ ಕೋಟ ಉಪನ್ಯಾಸ ನೀಡಿ, ಎಲ್ಲಿದೆ ಸಮಾನತೆ,  ಎಲ್ಲಿದೆ ಸ್ವಾತಂತ್ರ್ಯ , ಎಲ್ಲಿದೆ ಪ್ರಜಾಪ್ರಭುತ್ವ,  ಎಲ್ಲಿದೆ ಜಾತ್ಯಾತೀತತೆ ಎಲ್ಲಿದೆ ? ಎಲ್ಲಿದೆ ನಂದನ, ಎಲ್ಲಿದೆ ಬಂಧನ, ಎಲ್ಲ ಇವೆ ನಮ್ಮೊಳಗೆ ಎಂಬಂತೆ ಎಲ್ಲವೂ ಇವೆ ಪುಸ್ತಕಗಳೊ ಳಗೆ  ಮಾತ್ರ. ಇವೆಲ್ಲವೂ ಇರುವುದು ರಾಜಕೀಯ ಪಟ್ಟ ಭದ್ರ ಹಿತಾಸಕ್ತಿಯ ಕೈಯೊಳಗೆ ಎನ್ನಬಹುದು. ಭಾರತ ಜಾತ್ಯತೀತ ರಾಷ್ಟ್ರ. ಈ ಪರಿಕಲ್ಪನೆಯ ಮೂಲಾಧಾರ ಸಮಾನತೆ. ಇದರ ಆಧಾರದಲ್ಲಿಯೇ ನಮಗೆ ಸ್ವಾತಂತ್ರ್ಯ ದೊರಕಿದ್ದು ಎನ್ನುವುದು ನಮಗೆ ನೆನಪಿರಬೇಕು. ಅಂದರೆ ಈ ಜಾತ್ಯತೀತತೆ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಉಳಿದಿದೆಯೇ? ಈ ಪ್ರಶ್ನೆಗೆ ಬಹಳ ವಿಷಾದದಿಂದ ಇಲ್ಲ ಎಂದೇ ಹೇಳಬೇಕಾಗಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿಕೊಳ್ಳಲು ಈ ಸಮತಾವಾದಕ್ಕೆ ವಿರುದ್ಧವಾದ ಜಾತೀಯತೆಯೇ ಪ್ರಾಧಾನ್ಯವನ್ನು ಪಡೆದುಕೊಂಡಿದೆ. ಜಾತಿಯ ಆಧಾರದಲ್ಲಿ ಮತಗಳನ್ನು ಎಣಿಕೆ ಮಾಡುವ ಮನಃಸ್ಥಿತಿಯ ರಾಜಕಾರಣಿಗಳು ಹೇರಳ ಸಂಖ್ಯೆಯಲ್ಲಿದ್ದಾರೆ. ರಾಜಕೀಯ ಪ್ರೇರಿತ ಲಾಲಸೆಯ ಕಾರಣದಿಂದ ಸಮತಾ ವಾದವನ್ನು ಗಾಳಿಗೆ ತೂರುತ್ತ ಬಂದು ಜಾತೀಯತೆಯ ಭೇದವನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸಾಮಾಜಿಕವಾಗಿಯೂ ಬಹುದೊಡ್ಡದಾದ ವಿಪ್ಲವವನ್ನು ನಾವಿಂದು ಕಾಣುತ್ತೇವೆ. 

ಇದಕ್ಕೆ ನೇರ ಕಾರಣ ರಾಜಕೀಯ ಪಕ್ಷಗಳಾಗಿವೆ. ಧರ್ಮ ಮತ್ತು ಜಾತಿಯನ್ನು ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲಲು ಪ್ರಮುಖ ಅಸ್ತ್ರವನ್ನಾಗಿ ಉಪ ಯೋಗಿಸಿಕೊಳ್ಳುತ್ತಿರುವುದು ರಾಷ್ಟ್ರದ ದುರದೃಷ್ಟ ಹಾಗೂ ತತ್ವ ಸಿದ್ಧಾಂತಗಳಿಗೆ ಮೀರಿದ ಒಂದಷ್ಟು ಸ್ವಾರ್ಥಗಳು ಇದಕ್ಕೆ ಕಾರಣ. ಇದರ ಕಾರಣದಿಂದ ಧರ್ಮದ ನೆಲೆಯಲ್ಲಿ ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂದು ನುಡಿದರು.

Advertisement

ಸಂಘದ ಅಧ್ಯಕ್ಷ ರಮೇಶ್‌ ಕೆ. ಶೆಟ್ಟಿ ಪಯ್ನಾರು ಅವರು ಸ್ವಾಗತಿಸಿದರು. ಇಂದಿರಾ ಮೊಲಿ, ಶಾಂತಾ ಎನ್‌. ಶೆಟ್ಟಿ, ಸ್ನೇಹಾ ಆರ್‌. ಕುಲಕರ್ಣಿ ಇವರು ಅತಿಥಿಗಳನ್ನು ಪರಿಚಯಿಸಿದರು. ಸಚ್ಚೀಂದ್ರ ಕೆ. ಕೋಟ್ಯಾನ್‌, ಲಕ್ಷ್ಮೀ ಆರ್‌. ಶೆಟ್ಟಿ ಅವರು ಅತಿಥಿಗಳನ್ನು  ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಗುಣೋದಯ ಐಲ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next