Advertisement
ವರ್ಷವೊಂದರಲ್ಲಿರುವ ಮುನ್ನೂರ ಅರುವತ್ತೈದು ದಿವಸ ಗಳು ಭಾರತೀಯರಿಗೆ ಹಬ್ಬಗಳೇ. ಭಾರತದ ಒಟ್ಟು ಹಬ್ಬ ಗಳನ್ನು ಗಣಿಸಿದರೆ ಅದು ಇನ್ನೂ ಎಷ್ಟೋ ಹೆಚ್ಚೆಂಬು ದರಲ್ಲಿ ಸಂದೇಹವೇ ಇಲ್ಲ. ಇವುಗಳಲ್ಲಿ ಕೆಲವು ಸ್ಥಳೀಯ ವಾದವು, ಕೆಲವು ಪ್ರಾದೇಶಿಕ ವಾದವು, ಕೆಲವು ಇಡಿಯ ದೇಶದಲ್ಲಿ ಆಚರಿಸಲ್ಪಡುವಂಥವು. ಇವುಗಳಲ್ಲಿ ಯುಗಾದಿ, ರಾಮನವಮಿ, ನಾಗರಪಂಚಮಿ, ಶ್ರೀಕೃಷ್ಣಾ ಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಮಕರ ಸಂಕ್ರಾಂತಿ, ಶಿವರಾತ್ರಿ ಇವು ಬಹಳ ವ್ಯಾಪಕವಾಗಿ ಅಖೀಲ ಭಾರತ ಮಟ್ಟದಲ್ಲಿ ಭಕ್ತಿಶ್ರದ್ಧಾಪೂರ್ವಕವಾಗಿ ವೈಭವದಿಂದ ಆಚರಿಸಲ್ಪಡುವ ಹಬ್ಬಗಳು. ಇವುಗಳಲ್ಲಿ ಕೆಲವು ಒಂದು ದಿನದ ಹಬ್ಬಗಳಾದರೆ ಇನ್ನು ಕೆಲವು ಹಬ್ಬಗಳು ಹಲವು ದಿನಗಳ ಆಚರಣೆ ಗಳ ಸರಣಿಯಾಗಿವೆ. ದೀಪಾವಳಿ ಎಂಬುದು ಈ ರೀತಿಯ ಒಂದು ಹಬ್ಬಗಳ ಸರಣಿ.
Related Articles
Advertisement
ದೀಪಾವಳಿಗೆ ಸಂಬಂಧಿಸಿದಂತೆ ಮುಖ್ಯವಾಗಿರುವ ಕಥೆಗಳು ಎರಡು. ನರಕಚತುರ್ದಶಿಗೆ ಸಂಬಂಧಿಸಿ ನರಕಾಸುರ ವಧೆಯ ಕಥೆ, ಬಲಿಪಾಡ್ಯಕ್ಕೆ ಸಂಬಂಧಿಸಿ ವಾಮನರೂಪಿ ಮಹಾವಿಷ್ಣುವು ಬಲಿಯನ್ನು ಒತ್ತಿ ಪಾತಾಳಕ್ಕೆ ಕಳುಹಿಸಿ ಆತನನ್ನು ಉದ್ಧರಿಸಿದ ಕಥೆ. ಎರಡೂ ಪುರಾಣ ಪ್ರಸಿದ್ಧವಾದ ಕಥೆಗಳೇ. ಶ್ರೀರಾಮನು ಅಸುರರನ್ನು ಗೆದ್ದು ಸಂಭ್ರಮಾಚರಣೆ ಮಾಡಿದ ಹಬ್ಬವೆಂದೂ ಆಚರಣೆಗೆ ಹಿನ್ನೆಲೆಯನ್ನು ಹೇಳಿದ್ದಿದೆ. “ಯಮ ದ್ವಿತೀಯ’ ಎಂದು ಯಮಧರ್ಮರಾಯನು ತನ್ನ ತಂಗಿಯಾದ ಯಮುನಾ ದೇವಿಯ ಮನೆಗೆ ಹೋಗಿ ಆಕೆಗೆ ಸಂತೋಷವನ್ನುಂಟು ಮಾಡಿ ಸಂಭ್ರಮಿಸಿದನೆಂದು ಕಥೆಯಿದೆ. ಬಂಧುಗಳೆಲ್ಲ ಒಟ್ಟಾಗಬೇಕೆಂದು ಮನೆಯ ಮಕ್ಕಳೆಲ್ಲ ಸಂತೋಷದಿಂದ ಇರುವಂತಾಗಬೇಕೆಂದು ಸಂಭ್ರಮಾಚರಣೆ ಯಿಂದ ಮುಂದಿನ ದಿನಗಳಲ್ಲಿ ಹೊಸ ಜೀವನೋತ್ಸಾಹವನ್ನು ಪಡೆಯಬೇಕೆಂದು ಉದ್ದೇಶಿಸಿ ಕೊಂಡು ಈ ಹಬ್ಬಗಳ ಆಚರಣೆ ಎಂಬುದರಲ್ಲಿ ಸಂದೇಹವಿಲ್ಲ.
ಕೃಷಿಕರಿಗೆ ಹೊಸ ಫಸಲು ಕೈಸೇರಿದ ದೀಪಾವಳಿ. ವ್ಯಾಪಾರಿಗಳಿಗೆ ಲಕ್ಷ್ಮೀ ಪೂಜೆ ಮಾಡಿ ಹಳೆಯ ಲೆಕ್ಕಾಚಾರಗಳನ್ನು ಚುಕ್ತಾ ಮಾಡಿ ಹೊಸ ವರ್ಷವನ್ನು ಪ್ರಾರಂಭಿಸುವ ಸಮಯ. ಈ ಲಕ್ಷ್ಮೀ ಪೂಜೆಯೇ ಅಂಗಡಿ ಪೂಜೆಯೆಂದು ಗುರುತಿಸಲ್ಪಟ್ಟಿದೆ.
ಭಾರತೀಯ ಸಂಸ್ಕೃತಿಯಲ್ಲಿ ಗೋವಿನ ಸ್ಥಾನ ವಿಶಿಷ್ಟವಾದುದು. ಗೋವನ್ನು ಮಾತೆಯೆಂದು ಪೂಜಿಸುವವರು ನಾವು. ಗೋಪೂಜೆಯ ಹಬ್ಬ ಬಲಿಪಾಡ್ಯಮಿಯಂದು ನಡೆಯುತ್ತದೆ. ದೀಪಾವಳಿಯ ಕನಿಷ್ಠ ಮೂರು ದಿನಗಳಲ್ಲಿ ಗೋವುಗಳಿಗೂ ವಿಶ್ರಾಂತಿ ಇರುತ್ತದೆ. ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೃಷಿಗೆ ಹಿಂದೆ ಜಾನುವಾರುಗಳೇ ಆಧಾರವಾಗಿದ್ದವು. ಕೋಣ, ಎತ್ತುಗಳನ್ನು ಗದ್ದೆ ಉಳುಮೆ ಮಾಡಲು ಬಳಸಲಾಗುತ್ತಿತ್ತು. ವರ್ಷದ ಹೆಚ್ಚಿನ ಅವಧಿಯಲ್ಲಿ ರೈತನ ಜತೆಗದ್ದೆಯಲ್ಲಿಯೇ ಕಾಲ ಕಳೆಯುವ ಇವುಗಳಿಗೆ ದೀಪಾವಳಿ ಸಂದರ್ಭ ಗೋಪೂಜೆ ದಿನ ವಿಶೇಷ ಪೂಜೆ ಸಲ್ಲುತ್ತದೆ.
ದೀಪಾವಳಿ ಸಂದರ್ಭ ಮೂರು ದಿನ ಕೃಷಿ ಕಾಯಕಗಳಿಗೆ ವಿರಾಮ ಎಂಬುದು ತುಳುನಾಡಿನ ಜನರ ಅಲಿಖೀತ ನಿಯಮ ವಾಗಿದೆ. ಈ ದಿನಗಳಲ್ಲಿ ಗದ್ದೆ ಕೆಲಸಗಳು ಅಂದರೆ, ಭತ್ತ ಕೊಯ್ಲು ಮಾಡುವುದು, ಗದ್ದೆ ಉಳುಮೆ ಇತ್ಯಾದಿಗಳಿಗೆ ವಿಶ್ರಾಂತಿ. ಗೋಪೂಜೆ ಮತ್ತು ಗದ್ದೆಗಳಿಗೆ ದೀಪ ಇಡುವ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಪಾಡ್ಯದಂದೇ ನಡೆಯುತ್ತದೆ. ಬೆಳಗ್ಗೆ ಗೋಪೂಜೆ ನಡೆಸಿ ಸಂಜೆ ಗದ್ದೆಗಳಿಗೆ ದೀಪ ಇಟ್ಟು, ರಾತ್ರಿ ಜಾನುವಾರುಗಳಿಗೆ “ತುಡಾರ್’ (ದೀಪ) ತೋರಿಸುವ ಕ್ರಮ ಜಾನಪದೀಯವಾಗಿ ನಡೆದು ಬಂದಿದೆ.
ಗೋಪೂಜೆ ದಿನ ಬೆಳಗ್ಗೆ ಗೋವುಗಳನ್ನು ನದಿ, ಕೆರೆಗಳಿಗೆ ಕೊಂಡೊಯ್ದು (ಇತ್ತೀಚೆಗೆ ಹೆಚ್ಚಿನ ಕಡೆ ಪಂಪ್ ಮೂಲಕ ನೀರು ಹಾಯಿಸಿ ಮನೆಯಲ್ಲಿಯೇ ಸ್ನಾನ ಮಾಡಿಸಲಾಗುತ್ತಿದೆ) ಸ್ವತ್ಛವಾಗಿ ತೊಳೆಯಲಾಗುತ್ತದೆ. ಕೋಣಗಳಿಗಾದರೆ ಮೈ ಪೂರ್ತಿ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಲಾಗುತ್ತದೆ. ಸ್ನಾನದ ಬಳಿಕ ಗೋವುಗಳಿಗೆ ಶೃಂಗಾರ ಮಾಡಲಾಗುತ್ತದೆ. ಮೈ ಮೇಲೆ ಸುಣ್ಣದ ಚಿತ್ತಾರ ಮೂಡಿಸಿ, ಚೆಂಡು ಹೂವು ಅಥವಾ ಊರಿನ ಸಾಮಾನ್ಯ ಹೂವಿನ ಮಾಲೆ ತಯಾರಿಸಿ ಅವುಗಳನ್ನು ಗೋವಿನ ಕೊರಳಿಗೆ ಹಾಕಲಾಗುತ್ತದೆ. ಸಂಜೆಯ ವೇಳೆ ಗದ್ದೆಗಳಿಗೆ ದೀಪ ಇರಿಸಿದ ಬಳಿಕ ತುಡಾರ್ ತೋರಿಸಿ ತಲೆಗೆ ತೆಂಗಿನ ಎಣ್ಣೆ ಹಾಕಿ ಕುಂಕುಮ ಹಚ್ಚಿ ಕೃತಜ್ಞತಾ ಪೂರ್ವಕವಾಗಿ ಪ್ರಾರ್ಥಿಸಲಾಗುತ್ತದೆ (ಇದು ಪ್ರದೇಶದಿಂದ ಪ್ರದೇಶಕ್ಕೆ ಅಲ್ಪ ಭಿನ್ನವಾಗಿರುತ್ತದೆ.)
ಇದಾದ ಬಳಿಕ ರಾತ್ರಿ ಮನೆಮಂದಿಗಾಗಿ ತಯಾರಿಸುವ ಅಕ್ಕಿಯ ಸಿಹಿ ಗಟ್ಟಿಯನ್ನು ಜಾನುವಾರುಗಳಿಗೂ ನೀಡಲಾಗುತ್ತದೆ. ಮರುದಿನ ಬೆಳಗ್ಗೆ ಕೂಡ ಸಿಹಿ ನೀಡಿ ವಿಶೇಷವಾದ ಅಕ್ಕಿ ಗಂಜಿಯನ್ನು ಎಲ್ಲ ಜಾನು ವಾರುಗಳಿಗೆ ನೀಡಲಾಗುತ್ತದೆ. ಈ ಮೂಲಕ ಕರಾವಳಿಯಲ್ಲಿ ದೀಪಾವಳಿ ಸಂದರ್ಭ ಗೋಪೂಜೆ ವಿಶೇಷವಾಗಿ ಆಚರಿಸಲ್ಪಡುತ್ತದೆ.
ಗೋವರ್ಧನಗಿರಿಯ ಪೂಜೆಯ ಸಂಕೇತವಾಗಿ ಗೋಮಯವಾದ ಪುಟ್ಟಗಿರಿಯ ಆಕಾರವನ್ನು ನಿರ್ಮಿಸಿ ಪೂಜಿಸುವ ಪದ್ಧತಿಯೂ ಇದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಶ್ರೀಮನ್ನಾರಾಯಣನು ನರಕಾಸುರ ವಧೆ ಮಾಡಿದ ಮತ್ತು ಬಲಿಯನ್ನು ಉದ್ಧರಿಸಿದ ಕಾರಣ ವಿಷ್ಣು ಪೂಜೆ, ಬಲೀಂದ್ರ ಪೂಜೆ, ಮಹಾಲಕ್ಷ್ಮೀ ಪೂಜೆ, ಮಹಾದೇವನ ಪೂಜೆ, ಧನದ ದೇವನಾದ ಕುಬೇರನ ಪೂಜೆ, ಯಮನ ಪೂಜೆ, ಗೋಪೂಜೆ, ಗೋವರ್ಧನ ಗಿರಿ ಪೂಜೆ ಎಲ್ಲವೂ ಇವೆ.
-ಪಾದೇಕಲ್ಲು ವಿಷ್ಣು ಭಟ್ಟ