ರಾಧಾಕೃಷ್ಣ ಎಂದಾಗಲೇ ಹೊಟ್ಟೆಯಲ್ಲಿ ಕಚಗುಳಿ ನವಿರಾದ ನವಲುಗರಿ ಕೆನ್ನೆ ಸವರಿ ಹೋದಂತೆ, ಇನ್ನೆಲ್ಲೋ ಕೊಳಲ ಗಾನ ಕಿವಿಗೆ ಕೇಳಿದಂತೆ, ದೂರದಲ್ಲಿ ಎಲ್ಲೋ ಯಮುನೆ ಹರಿದಂತೆ. ಪೂರ್ಣ ಚಂದಿರ ನಸುನಕ್ಕಂತೆ, ತಾರೆಗಳು ಕಣ್ ಮಿಟುಸಿದಂತೆ , ದೂರದಲ್ಲೆಲ್ಲೋ ಬಿರಿದ ಪಾರಿಜಾತ ಘಮ, ತೂಗುವ ಉಯ್ಯಾಲೆಯ ಸಣ್ಣ ಸದ್ದು, ಶ್ಯಾಮನ ತುಳಸಿ ಮಾಲೆಯ ಪರಿಮಳ ಸುಗಂಧದ ಘಮ.
ಆಹಾ, ಪುರಾಣದ ಉಲ್ಲೇಖದಲ್ಲಿರಲ್ಲಿ, ಬಿಡಲಿ ರಾಧಾಕೃಷ್ಣ ಎನ್ನುವುದೇ ಒಂದು ಅನುಭೂತಿ ಅದ್ಯಾವ ಕಡುಪ್ರೇಮಿಯೂ ತನ್ನನ್ನು ತಾನು ಕೃಷ್ಣನಿಗೆ ಹೋಲಿಸಿಕೊಳ್ಳದೆ ಇರಲಾರೆ. ಲೈಲಾ ಮಜನೂ, ದೇವದಾಸ್ ಪಾರ್ವತಿಯಂತಹಾ ಎಷ್ಟೇ ಜೋಡಿಗಳು ಬಂದು ಹೋದರೂ ರಾಧಾ-ಕೃಷ್ಣ ಅಜರಾಮರ. ಅವರ ಪ್ರೀತಿಯೇ ಹಾಗೆ ದೈವಿಕ ಆಧ್ಯಾತ್ಮಿಕದ ಪರಾಕಷ್ಟೇ.
ಹೇಳಿಕೊಳ್ಳಲು ಅವಳಿಗೇನಿತ್ತು. ಕೃಷ್ಣ ತನ್ನನ್ನು ಪ್ರೀತಿಸುತ್ತಾನೆ ಎನ್ನುವುದನ್ನು ಬಿಟ್ಟರೆ ಅಧಿಕೃತ ಮುದ್ರೆಯ ರಹಿತವೂ ಆಕೆ ಪ್ರೀತಿಸಿದಳು ಪ್ರೀತಿಸುತ್ತಿದ್ದಳು.
ಆದರೆ ನನ್ನನ್ನು ಅತೀವವಾಗಿ ಕಾಡುವ ಪ್ರಶ್ನೆ ಒಂದಿದೆ. ಅಂದಿನ ಕೃಷ್ಣನೇ ಇರಲಿ ಇಂದಿನ ಅತ್ಯದ್ಭುತ ಪ್ರೇಮಿ ಎಂದುಕೊಂಡ ಯಾವುದೇ ಹುಡುಗನಿರಲಿ ಅವನಿಗೆ ಕೃಷ್ಣನಾಗುವುದು ಸುಲಭವೇ ಇರಬಹುದು. ಆದರೆ ರಾಧೆಗೆಲ್ಲ ಕೆಲವು ಕಥೆಗಳಲ್ಲಿ ರಾಧೆ ವಿವಾಹಿತೆ, ಇನ್ನು ಕೆಲ ಕಥೆಗಳು ಬೇರೆ ಬೇರೆ ರೀತಿಯಲ್ಲಿ ಹೇಳಿದರೂ. ರಾಧೆ ಒಬ್ಬ ಅಪ್ಪಟ ಪ್ರೇಮಿ ಎಂದು ಯೋಚಿಸುವುದಾದರೆ, ಅವಳಿಗದೆಷ್ಟು ಕಷ್ಟವಿತ್ತು .
ಒಂದು ಕಡೆ ಪ್ರೇಮಿಯ ಸೆಳೆತ ಮತ್ತೂಂದು ಕಡೆ ಸಂಸಾರ ಬಂಧನ ಕೃಷ್ಣನನ್ನು ಸುತ್ತುವರಿದ ಗೋಪಿಕೆಯ ದಂಡು, ಮತ್ತೂಂದೆಡೆ ಚಟಪಡಿಕೆ, ಕಾಯುವಿಕೆಯ ಹಾತಾಶೆ, ಸಿಕ್ಕ ರಾತ್ರಿಯೂ ಕ್ಷಣದಂತೆ ಕಳೆದು ಮತ್ತೆ ಮೂಡುವ ಮುಂಜಾವು, ಕಾಡುವ ಸಮಾಜದ ಕಟ್ಟಲೆಗಳು ಬೇಕಿದ್ದು ಬೇಡದೆಯೋ ಅದುಮಿಟ್ಟುಕೊಳ್ಳಲೇ ಬೇಕಾದ ಭಾವನೆಗಳು ನೀಡುವ ನೋವು. ಒಬ್ಬ ಹುಡುಗ ತಾನು ಪ್ರೀತಿಸಿದ ಹುಡುಗಿ ಸಿಕ್ಕಿಲ್ಲ ಎಂದಾಗ ವಿವಾಹವಾಗದೆ ಇರಲು ಒಪ್ಪುವ ಸಮಾಜ. ಅದೇ ಒಂದು ಹುಡುಗಿ ತಾನು ಪ್ರೀತಿಸಿದ ವ್ಯಕ್ತಿ ಸಿಗಲಿಲ್ಲವೆಂದು ಒಂಟಿಯಾಗಿ ಇರಗೊಡುವುದಿಲ್ಲ. ಆಕೆ ಆದಷ್ಟು ಉತ್ಕಟ ಪ್ರೇಮಿಯೂ ಆಗಿರಲಿ. ಅವಳಿಗೆ ಅವಳಂತೆ ಅವಳು ಇಷ್ಟಪಟ್ಟಂತೆ ಬದುಕುವ ಜೀವನ ಸಾಗಿಸುವ ಆಯ್ಕೆ ದುರ್ಲಾಭವೆ ಮತ್ತದೇ ಗೋಳು ಮನದಲ್ಲಿ ಒಬ್ಬ ಎದುರಲ್ಲಿ ಒಬ್ಬ ಆಕೆಯೊಳಗಿರುವ ರಾಧೆ ಬಿಕ್ಕುತ್ತಲೆ ಇರುತ್ತಾಳೆ. ಇನ್ನು ಕರ್ತವ್ಯದ ಕಾರಣದಿಂದಾಗಿ ತೊರೆದ ಮಾಧವ ತನ್ನ ಕೆಲಸದಲ್ಲಿ ವ್ಯಸ್ತನಾಗಿ ಅದೆಷ್ಟೋ ಬಾರಿ ರಾಧೆಯನ್ನು ನೆನೆದ ಎನ್ನುವ ಪ್ರಶ್ನೆ ಹಾಸ್ಯಸ್ಪದವಾದರೂ ಸ್ವಲ್ಪ ಸರಳೀಕರಿಸುವುದಾದರೆ. ಒಬ್ಬ ವ್ಯಸ್ತ ವ್ಯಕ್ತಿಯ ಮನದಲ್ಲಿ ಸಾವಿರಾರು ಭಾವನೆಗಳಿದ್ದರೂ ಅದು ಕಾಡುವುದು ತೀವ್ರವಾಗುವುದು ಅವನು ಬಿಡುವಾದಾಗ ಮಾತ್ರ ತನ್ನನ್ನು ತಾನು ಮರೆಯಲು ಕೆಲಸದ ಮರೆಹೋಗುವುದು ಸಹಜವೇ ಆದರೆ ರಾಧೆಯ ಸ್ಥಿತಿ ಹೇಗೆ ಇತ್ತು ಎಂಬ ಪ್ರಶ್ನೆ ನನ್ನನ್ನು ಬಾಧಿಸುತ್ತಲೇ ಇರುತ್ತದೆ.
ವಿರಹಿಯೇ ಶ್ರೀ ಕೃಷ್ಣ, ಕಂಸನ ಸಂಹಾರ ಅನಂತರದ ಘಟನೆಗಳು ಮಹಾಭಾರತದ ಸಾಲು ಸಾಲುಗಳಲ್ಲಿ ರಾರಾಜಿಸುವ ಶ್ರೀ ಕೃಷ್ಣನ ಮಹಿಮೆ ಆತನೇನು ವಿರಹ ಪೀಡಿತನಾಗಿರಲಿಲ್ಲ ಎನ್ನುವುದು ಅಸಾಧ್ಯ. ಆದರೆ ಅವನ ನೆನಪನ್ನೇ ಹೊದ್ದು ಆಸೆ ಕೊಯ್ದ ರಾಧೆ..?ಹೇಗೆ ತಡೆದುಕೊಂಡಳು ವಿರಹದ ವ್ಯಥೆ?. ಗಂಧಪೂಸಿದರೂ ಸುಡುವ ದೇಹ ಬಾಯಾರಿಕೆಯಂತೆ ಬೇಡವೆಂದರು ಕಾಡುವ ಮುರಾರಿ ನೆನಪುಗಳು, ಎಂದೊ ಹೆಜ್ಜೆ ಇಟ್ಟು ಅಳಿಸಿದ ಅವನ ಪಾದದ ಗುರುತು, ಪ್ರೀತಿಯ ಪರಾಕಾಷ್ಟೇಯಲ್ಲಿ ಅರಳಿ ಈಗ ಒಣಗಿದ ಗೀರುಗಳು, ಧಾರಾಕಾರವಾಗಿ ಸುರಿದ ಅಶ್ರು, ಒಪ್ಪಗೊಳಿಸದ ಅವಳ ಮುಡಿ, ಅಂದ ಹೆಚ್ಚಿಸದ ಆಭರಣಗಳು…! ಅಲ್ಲಿ ಕೃಷ್ಣನಿಗೆ ಎಲ್ಲವೂ ಇತ್ತು, ರಾಧೆ ಇರಲಿಲ್ಲ, ಇಲ್ಲಿ ರಾಧೆಗೆ ಏನೂ ಇರಲಿಲ್ಲ ಮತ್ತೆ ಕೃಷ್ಣನೂ…!
ಗಣೇಶ ಜಿ. ಬಿ.
ಕುವೆಂಪು ವಿವಿ, ಶಂಕರಘಟ್ಟ