Advertisement

ದಾನ-ಧರ್ಮಕ್ಕೆ ಕುಕ್ಯಾನರು ಸದಾ ಸ್ಮರಣೀಯರು: ಗೋಪಾಲ್‌ ವೈ. ಶೆಟ್ಟಿ

07:58 PM Feb 02, 2021 | Team Udayavani |

ಮುಂಬಯಿ, ಫೆ. 1: ನವ ಮುಂ ಬಯಿ ಕನ್ನಡ ಸಂಘ ವಾಶಿ ಇದರ ಬೆಳವಣಿಗೆಗೆ ಕಾರಣೀಭೂತರಾಗಿರುವ ಸಾಹಿತಿ, ಸಮಾಜ ಸೇವಕ ಎಂ. ಬಿ. ಕುಕ್ಯಾನ್‌ ಅವರ ನಡೆ-ನುಡಿ ನಮಗೆ ಸದಾ ಪ್ರೇರಣೆಯಾಗಿದೆ. ದಾನ, ಧರ್ಮ ತನ್ನ ಕರ್ತವ್ಯ ಎಂದು ಅಸಹಾಯಕರಿಗೆ ಸಹಾಯ ಮಾಡುತ್ತಿದ್ದ ಅವರು ಸದಾ ಸ್ಮರಣೀಯರು ಎಂದು ನವಿಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ ತಿಳಿಸಿದರು.

Advertisement

ಜ. 31ರಂದು ನವ ಮುಂಬಯಿ ಕನ್ನಡ ಸಂಘದ ಎಂ. ಬಿ. ಕುಕ್ಯಾನ್‌ ಸಭಾಗೃಹದಲ್ಲಿ ಜರಗಿದ ಇತ್ತೀಚೆಗೆ ನಿಧನ ಹೊಂದಿದ ಎಂ. ಬಿ. ಕುಕ್ಯಾನ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಅವರು, ಎಂ. ಬಿ. ಕುಕ್ಯಾನ್‌ ಅವರು ಜೀವಿತಕಾಲದಲ್ಲಿ ಸಮಾಜ ಸೇವೆಯ ಮೂಲಕ ಸಾರ್ಥಕತೆಯ ಜೀವನವನ್ನು ನಡೆಸಿದವರು, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಮೆರೆದವರು. ಅವರ ನಡೆನುಡಿ ನಮಗೆ ಯಾವಾಗಲೂ ಪ್ರೋತ್ಸಾಹದಾಯಕವಾಗಿದೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಬಿ. ಎಚ್‌. ಕಟ್ಟಿ ಮಾತನಾಡಿ, ಎಂ. ಬಿ. ಕುಕ್ಯಾನ್‌ ಅವರು ಸಂಘವನ್ನು ತನ್ನದೇ ಸಂಸ್ಥೆಯ ಎಂಬಂತೆ ಪ್ರೀತಿಸುತ್ತಿದ್ದರು. ಶಿಕ್ಷಣಕ್ಕೆ ಅವರ ಕೊಡುಗೆ ತುಂಬಾ ಇದೆ. ಅವರ ಸಮಾಜ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ರಾವ್‌ ಮಾತನಾಡಿ, ಎಲ್ಲರನ್ನೂ ಪ್ರೀತಿ-ಗೌರವದಿಂದ ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು. ಉದ್ಯಮಿ ಬೋಂಬೆ ಬಂಟ್ಸ್‌ ಅಸೋಶಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಶೆಟ್ಟಿ ಮಾತನಾಡಿ, ನವಿಮುಂಬಯಿಯಲ್ಲಿ ಪ್ರಾರಂಭದಲ್ಲಿ ಉದ್ಯಮವನ್ನು ಬೆಳೆಸಿ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿ ದ್ದ ನಗುಮುಖದ ಎಂ. ಬಿ. ಕುಕ್ಯಾನ್‌ ಅವರು ನಮಗೆಲ್ಲ ರಿಗೂ ಪ್ರೇರಣಾ ಮೂರ್ತಿಯಾಗಿದ್ದಾರೆ ಎಂದರು.

ಮುಂಬಯಿ ಕನ್ನಡ ಸಂಘದ ಗೌರವ ಕೋಶಾಧಿಕಾರಿ ಅನಿಲ್‌ ಕುಮಾರ್‌ ಹೆಗ್ಡೆ ಮಾತನಾಡಿ, ಎಂ. ಬಿ. ಕುಕ್ಯಾನ್‌ ಅವರ ಆದರ್ಶ ನಮಗೆ ಮಾರ್ಗದರ್ಶಕವಾಗಿದೆ. ಮಿತಭಾಷಿಯಾಗಿದ್ದ ಅವರು ಮಾಡುತ್ತಿದ್ದ ಕಾರ್ಯ ಸದಾ ನಮಗೆ ನೆನಪಿನಲ್ಲಿ ಇರುವಂತಾಗಿದೆ ಎಂದರು

ಸಂಘದ ಉಪಾಧ್ಯಕ್ಷ ಮಧುಸೂದನ್‌ ರಾವ್‌ ಮಾತನಾಡಿ, ಸಂಘ-ಸಂಸ್ಥೆಗಳಿಗೆ ಅವರು ನೀಡಿದ ಕೊಡುಗೆಯೂ ಸದಾ ನಮಗೆ ನೆನಪಿನಲ್ಲಿ ಇರುವಂತಾಗಿದೆ ಎಂದು ಹೇಳಿ ಶ್ರದ್ಧಾಂಜಲಿ ಸಲ್ಲಿಸಿದರು. ಮುಂಬಯಿ ಕನ್ನಡ ಸಂಘದ ಪದಾಧಿಕಾರಿ ಗೋಪಿ ರಾವ್‌ ಮಾತನಾಡಿ, ನವಿಮುಂಬಯಿ ಕನ್ನಡ ಸಂಘದ ಸಭಾಭವನ ನವೀಕರಣದಲ್ಲಿ ಎಂ. ಬಿ. ಕುಕ್ಯಾನ್‌ ಅವರ ಕೊಡುಗೆ ತುಂಬಾ ಇದೆ ಎಂದರು.

Advertisement

ಇದನ್ನೂ ಓದಿ:ಕೇಂದ್ರ ಬಜೆಟ್‌: ನಿರೀಕ್ಷೆಗಳು ಹುಸಿ

ಅಕ್ಷಯ ಮಾಸ ಪತ್ರಿಕೆಯ ಸಂಪಾದಕ ಈಶ್ವರ ಅಲೆವೂರು ಮಾತನಾಡಿ, ಇನ್ನೊಬ್ಬರ ಕಷ್ಟಕ್ಕೆ ಸಹಾಯ ಮಾಡುವುದರಲ್ಲಿ ಸಂತೃಪ್ತಿ ಕಂಡುಕೊಂಡ ಸಾಹಿತಿ ಎಂ. ಬಿ. ಕುಕ್ಯಾನ್‌ ಅವರಾಗಿದ್ದಾರೆ ಎಂದರು. ಲೇಖಕಿ ಶಾರದಾ ಅಂಚನ್‌ ಮಾತನಾಡಿ, ತಾನು ಸಾಹಿತಿಯಾಗಿದ್ದು, ಇತರ ಸಾಹಿತಿಗಳನ್ನು ಬೆಳೆಸಿ ಪ್ರೋತ್ಸಾಹಿಸುವಲ್ಲಿ ಅವರ ಕೊಡುಗೆ ತುಂಬಾ ಇದೆ ಎಂದರು.

ನವ ಮುಂಬಯಿ ಕನ್ನಡ ಸಂಘದ ಗೌರವ ಕಾರ್ಯದರ್ಶಿ ಜಗದೀಶ್‌ ಡಿ. ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ, ನವಿಮುಂಬಯಿ ಕನ್ನಡ ಸಂಘಕ್ಕೆ ಎಂ. ಬಿ. ಕುಕ್ಯಾನ್‌ ಅವರು ನೀಡಿದ ಕೊಡುಗೆಯನ್ನು ವಿವರಿಸಿದರು. ಎಂ. ಬಿ. ಕುಕ್ಯಾನ್‌ ಅವರ ಪುತ್ರ ವಿನೇಶ್‌ ತಂದೆಯವರು ಮಾಡಿದ ಸಮಾಜ ಸೇವೆ ಮತ್ತು ಅವರು ತೋರಿಸಿದ ದಾರಿಯನ್ನು ಎಂದಿಗೂ ನಾವು ಮರೆಯುವುದಿಲ್ಲ ಎಂದು ತಿಳಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಂ. ಬಿ. ಕುಕ್ಯಾನ್‌ ಅವರ ಹಿರಿಯ ಪುತ್ರ ವಿನಯ್‌, ಸಾಹಿತಿ ಸಾ. ದಯಾ, ನವಿಮುಂಬಯಿ ಕನ್ನಡ ಸಂಘದ ಉಪಾಧ್ಯಕ್ಷರಾದ ದಿನೇಶ್‌ ಉಪಾರ್ಣ, ಜ್ಯೋತಿ ಪ್ರಸಾದ್‌, ಬಾಲಕೃಷ್ಣ ಶೆಟ್ಟಿ, ಸಮಿತಿ ಸದಸ್ಯರಾದ ವಿ. ಕೆ. ಸುವರ್ಣ, ಸವಿತಾ ನಾಯಕ್‌, ಪ್ರಭಾಕರ ದೇವಾಡಿಗ, ಶ್ರೀಕಾಂತಿ, ಶೇಖರ ಮೂಲ್ಯ, ಎನ್‌. ಜಿ. ಪೂಜಾರಿ, ಬೋಜ ಜಿ. ದೇವಾಡಿಗ, ಇತರ ಸಮಿತಿ ಸದಸ್ಯರು, ಸಾಹಿತಿ ಎಂ. ಬಿ. ಕುಕ್ಯಾನ್‌ ಅವರ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next