ಕುಂದಾಪುರ: ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ತಾಯಿ – ಮಗಳು ಸಾವಿನ ಪ್ರಕರಣ ಸಂಬಂಧ ತಾಯಿಯ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಲಭ್ಯವಾಗಿದ್ದು, ಇದು ಸಹಜ ಸಾವೆಂದು ವರದಿಯಲ್ಲಿ ದೃಢಪಟ್ಟಿದೆ.
ಕಳೆದ ಮೇ 16 ರ ರಾತ್ರಿ ಮೂಡುಗೋಪಾಡಿಯ ದಾಸನಹಾಡಿಯ ಮನೆಯೊಂದರಲ್ಲಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಾಯಿಯ ಮೃತದೇಹದೊಂದಿಗೆ ಬರೋಬ್ಬರಿ 3 ದಿನ ಬುದ್ಧಿಮಾಂದ್ಯ ಪುತ್ರಿ ಪ್ರಗತಿ (32) ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 72 ಗಂಟೆಗಳ ಕಾಲ ತಾಯಿಯ ಮೃತದೇಹದೊಂದಿಗೆ ಕಳೆದ ಆಕೆಯೂ ಅನ್ನ, ನೀರಿಲ್ಲದೆ ತೀವ್ರ ನಿತ್ರಾಣಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಒಂದು ದಿನದ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ಮಣಿಪಾಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈಗ ತಾಯಿ ಜಯಂತಿ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಅದರಲ್ಲಿ ಇದು ಸ್ವಾಭಾವಿಕ ಸಾವೆಂದು ಉಲ್ಲೇಖೀಸಲಾಗಿದೆ. ಅಂದರೆ ಹೃದಯಾಘಾತ ಅಥವಾ ಲೋ ಬಿಪಿಯಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಊಟದಲ್ಲಿ ಏನಾದರೂ ವಿಷವುಣಿಸಲಾಗಿದೆಯೇ ಅನ್ನುವ ಅನುಮಾನದ ಹಿನ್ನೆಲೆಯಲ್ಲಿ ಮಂಗಳೂರಿನ ಆರ್‌ಎಫ್‌ಎಸ್‌ಎಲ್ ಲ್ಯಾಬ್‌ಗ ಹಾಗೂ ಬೆಂಗಳೂರಿನ ಎಫ್‌ಎಸ್‌ಎಲ್ ಲ್ಯಾಬ್‌ಗ ಅದರ ಸ್ಯಾಂಪಲನ್ನು ಸಹ ಕಳುಹಿಸಲಾಗಿದ್ದು, ಅದರಲ್ಲಿಯೂ ಯಾವುದೇ ವಿಷಪೂರಿತ ಆಗಿರುವ ಉಲ್ಲೇಖಗಳಿಲ್ಲ ಎನ್ನುವ ವರದಿ ಬಂದಿದೆ.
ಇದರೊಂದಿಗೆ ಈ ಪ್ರಕರಣ ಸಂಬಂಧ ಸಾರ್ವಜನಿಕ ವಲಯದಲ್ಲಿ ಇದ್ದಂತಹ ಕೆಲ ಗೊಂದಲಗಳು ನಿವಾರಣೆಯಾಗಿದೆ.