Advertisement

ಸಾಂಪ್ರದಾಯಿಕ ಬೆಳೆಗೆ ಗುಡ್‌ ಬೈ: ವೀಳ್ಯದೆಲೆ ಬೆಳೆದು ಲಕ್ಷ ಲಕ್ಷ ಗಳಿಸಿದ ಅನ್ನದಾತ

06:05 PM Feb 28, 2024 | Team Udayavani |

ಉದಯವಾಣಿ ಸಮಾಚಾರ
ಗಜೇಂದ್ರಗಡ: ಬಯಲು ಸೀಮೆಯಲ್ಲಿ ವಾಣಿಜ್ಯ ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಇದೀಗ ಸಾಂಪ್ರದಾಯಿಕ ಬೆಳೆಗೆ ಗುಡ್‌ಬೈ ಹೇಳಿ ತೋಟಗಾರಿಕೆ ಬೆಳೆಯಾದ ವೀಳ್ಳೆದೆಲೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಮಾದರಿಯಾಗಿದ್ದಾರೆ.

Advertisement

ಗೋಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಭೋಸಲೆ ಕೇವಲ 1 ಎಕರೆಗೆ ಕಡಿಮೆ ಜಮೀನಿನಲ್ಲಿ 884 ವೀಳ್ಯದೆಲೆ (ಎಲೆ ಬಳ್ಳಿ) ಸಸಿ, ನುಗ್ಗೆ, ಬೋರಲ, ಚೊಗಸಿ, ಅರಳಿ ಗಿಡಗಳಿಗೆ ಬಳ್ಳಿ ಹಬ್ಬಿಸಿ ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ ಅಂದಾಜು 12 ಲಕ್ಷ
ರೂ. ಆದಾಯ ಗಳಿಸಿದ್ದಾರೆ.

ಮಹಾತ್ಮಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆದು 884 ವೀಳ್ಯದೆಲೆ ಬಳ್ಳಿ ನಾಟಿ
ಮಾಡಿದ್ದರು. ಅದಕ್ಕೆ ಸರ್ಕಾರದಿಂದ 105 ಮಾನವ ದಿನಗಳ ಸೃಜಿಸಿ 45 ಸಾವಿರ ಕೂಲಿ ಮೊತ್ತ ಪಡೆದಿದ್ದಾರೆ. ಈಗ ಸಮೃದ್ಧವಾಗಿ ಬೆಳೆದ ವೀಳ್ಯದೆಲೆ ಮಾರಾಟ ಮಾಡಿದ್ದು, ತಿಂಗಳಿಗೆ ಅಂದಾಜು 80 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.

ವೀಳ್ಯದೆಲೆ ಬೆಳೆಯುವ ಪದ್ಧತಿ:
ವೀಳ್ಯದೆಲೆ ಬೆಳೆ ಬೆಳೆಯಲು ಜಮೀನು ಹದ ಮಾಡಿಕೊಂಡು 5×5 ಚೌರಸ್‌ ಅಳತೆ ತೆಗೆದುಕೊಂಡು ಅದರ ನಾಲ್ಕು ಕಡೆಯಲ್ಲಿ ಮೊದಲು ನುಗ್ಗೆ, ಬೋರಲ, ಚೊಗಸಿ, ಅರಳಿ ಬೀಜ ನಾಟಿ ಮಾಡಬೇಕು. ನಂತರ ನಾಟಿ ಮಾಡಿದ ಬೀಜದ ಪಕ್ಕದಲ್ಲೇ ವೀಳ್ಯದೆಲೆ ಬಳ್ಳಿ ನಾಟಿ ಮಾಡಿ 21ದಿನಗಳ ಕಾಲ ದಿನ ಮೂರು ಸಾರಿ ನೀರು ಹಾಕಿ ಜೋಪಾನ ಮಾಡಬೇಕು. ನಂತರ ಎಲೆ ಬಳ್ಳಿ ಚಿಗುರುತ್ತದೆ. ವೀಳ್ಯದೆಲೆ ಬೆಳೆ ಬೆಳೆಯಲು ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಧನ ಮೂಲಕ ಬೆಳೆ ಬೆಳೆಯಲು ಅವಕಾಶ ಕಲ್ಪಿಸಿದ್ದು, ತಾಲೂಕಿನಲ್ಲಿ ವೀಳ್ಯದೆಲೆ ಬೆಳೆ ಬೆಳೆಯಲು ರೈತರು ಮುಂದಾಗಿದ್ದಾರೆ.
ಗೋಗೇರಿಯಲ್ಲಿ ಸುಮಾರು 10ಕ್ಕೂ ಹೆಚ್ಚು ರೈತರು ವೀಳ್ಯದೆಲೆ ತೋಟ ಮಾಡಿಕೊಂಡಿದ್ದಾರೆ.

Advertisement

ಎಲೆ ಬಳ್ಳಿ ನಾಟಿ ಮಾಡಿ ಕನಿಷ್ಟ ಒಂದು ವರ್ಷ 5 ತಿಂಗಳು ಉತ್ತಮವಾಗಿ ಪೋಷಣೆ ಮಾಡಿದರೆ, ಎಲೆಬಳ್ಳಿ ತೋಟ ಇದ್ದರೆ ಮನೆಯಲ್ಲಿ ರೊಕ್ಕ ಇದ್ದಂಗ ನೋಡ್ರೀ.
ಮಲ್ಲಿಕಾರ್ಜುನ ಬೋಸಲೆ
ಎಲೆ ಬಳ್ಳಿ ತೋಟದ ರೈತ.

ನರೇಗಾ ಯೋಜನೆಯಡಿ ವೀಳ್ಯದೆಲೆ ಬೆಳೆ ಬೆಳೆಯಲು ಅವಕಾಶ ಇರುವುದರಿಂದ ತಾಲೂಕಿನಲ್ಲಿ ವೀಳ್ಯದೆಲೆ ಬೆಳೆಯಲು ಮುಂದಾಗಿದ್ದಾರೆ. ಅದರಂತೆ ಗೋಗೇರಿಯಲ್ಲಿ ಸುಮಾರು ರೈತರು ಆಸಕ್ತಿ ವಹಿಸಿ ನರೇಗಾ ಯೋಜನೆಯಡಿ ಎಲೆ ಬಳ್ಳಿ ತೋಟ ಮಾಡಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಹೆಚ್ಚಿನ ರೈತರು ನರೇಗಾ ಯೋಜನೆ ಲಾಭ ಪಡೆಯಬಹುದು.
ಡಾ|ಡಿ. ಮೋಹನ್‌, ತಾಪಂ ಇಒ

*ಡಿ.ಜಿ. ಮೊಮಿನ್‌

Advertisement

Udayavani is now on Telegram. Click here to join our channel and stay updated with the latest news.

Next