Advertisement

ರಾತ್ರಿಪಾಳಿ ಬಸ್‌ ಸೇವೆಗೆ ಉತ್ತಮ ರೆಸ್ಪಾನ್ಸ್‌

11:01 AM Dec 23, 2021 | Team Udayavani |

ಬೆಂಗಳೂರು: ವೋಲ್ವೋ ಬಸ್‌ಗಳಿಗೆ ಜನ ಬರು ತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾತ್ರಿಪಾಳಿಯಲ್ಲಿ ಕಾರ್ಯಾಚರಣೆ ಮಾಡುವ ಬಿಎಂಟಿಸಿ ಬಸ್‌ಗಳು ಮಾತ್ರ ಬಹುತೇಕ ಭರ್ತಿ ಆಗುತ್ತಿದ್ದು, ಈ ಮೂಲಕ ಸಂಸ್ಥೆಗೆ ಹೆಚ್ಚಿನ ಆದಾಯ ಕೂಡ ತರುತ್ತಿವೆ. ಕೊರೊನಾ ಹಾವಳಿ ಮತ್ತು ಸುದೀರ್ಘ‌ ಲಾಕ್‌ಡೌನ್‌ ನಿಂದ ಸುಮಾರು ಒಂದೂವರೆ ವರ್ಷದ ನಂತರ ನಗರದಲ್ಲಿ ರಾತ್ರಿಪಾಳಿ ಬಸ್‌ ಸೇವೆಗಳು ಆರಂಭಗೊಂಡಿವೆ.

Advertisement

ಈ ಸೇವೆ ಈಗ ಒಂದು ತಿಂಗಳು ಪೂರೈಸಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೇರೆ ಬೇರೆ ಊರುಗಳಿಂದ ನಗರಕ್ಕೆ ಬಂದಿಳಿದವರು, ಬೇರೆ ಕಡೆ ಹೋಗುವವರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳಿಗೆ ಇದರಿಂದ ಅನುಕೂಲವಾಗಿದೆ. ಆದರೆ, ಕೊರೊನಾ ಪೂರ್ವದಲ್ಲಿನ ಸ್ಥಿತಿಗೆ ಇನ್ನೂ ಮರಳಿಲ್ಲ.

ಬೆಂಗಳೂರಿನಲ್ಲಿ ನವೆಂಬರ್‌ ಮೊದಲ ವಾರದಲ್ಲೇ ರಾತ್ರಿ ಕರ್ಫ್ಯೂ ತೆರವಾಗಿದೆ. ಈ ಮಧ್ಯೆ “ನಮ್ಮ ಮೆಟ್ರೋ’ ಸೇವೆ ಅವಧಿಯನ್ನು ರಾತ್ರಿ 11.30ರವರೆಗೆ (ಮೆಜೆಸ್ಟಿಕ್‌ ನಿಂದ) ವಿಸ್ತರಿಸಲಾಗಿದೆ. ಮತ್ತೂಂದೆಡೆ ಕೊರೊನಾ ಹಾವಳಿ ತುಸು ತಗ್ಗಿದ್ದು, ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯಗಳು ಸಹಜಸ್ಥಿತಿಗೆ ಮರಳಿವೆ. ಈ ಎಲ್ಲ ಕಾರಣಗಳಿಂದ ನ. 15ರಿಂದ ಬಿಎಂಟಿಸಿಯು ರಾತ್ರಿಪಾಳಿ ಪುನಾರಂಭಿಸಿದೆ.

ಕಳೆದ ಒಂದು ತಿಂಗಳಿಂದ ಈ ಸೇವೆಗಳನ್ನು ಪ್ರಯಾಣಿಕರು ಸದುಪಯೋಗಪಡಿಸಿ ಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಾತ್ರಿ ಹೊರವಲಯದಲ್ಲಿ ಮೆಟ್ರೋ ನಿಲ್ದಾಣಗಳಿಗೆ ಬಂದಿಳಿಯುವ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಅನುಕೂಲ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ಭರ್ತಿ; ಚಾಲಕರು: “ನಾನು ನಿತ್ಯ ಕೆಂಗೇರಿ-ಯಶವಂತಪುರ ಮಾರ್ಗದಲ್ಲಿ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಸ್‌ ಬಹುತೇಕ ಭರ್ತಿ ಆಗಿರುತ್ತದೆ. ಕೆಂಗೇರಿಯಲ್ಲಿ ರೈಲು ನಿಲುಗಡೆ ಆಗುತ್ತಿದ್ದಂತೆ, ಆ ಪ್ರಯಾಣಿಕರಲ್ಲಿ ಬಹುತೇಕರು ಬಸ್‌ ಏರುತ್ತಾರೆ.

Advertisement

ಇದನ್ನೂ ಓದಿ: ಕಲಾವಿದರ ಸಂಘವನ್ನು ಭೂತ ಬಂಗಲೆ ಮಾಡಬೇಡಿ: ಮುಖ್ಯಮಂತ್ರಿ ಚಂದ್ರು

ಅದೇ ರೀತಿ, ಯಶವಂತಪುರದಿಂದ ಬೆಳಗಿನಜಾವ 5.15ರ ಸುಮಾರಿಗೆ ಕೆಂಗೇರಿ ಕಡೆಗೆ ಬರುವಾಗ ಮಾರ್ಗದಲ್ಲಿ ಗೊರಗುಂಟೆಪಾಳ್ಯ, ಪೀಣ್ಯದಲ್ಲಿ ದಾವಣಗೆರೆ, ಶಿವಮೊಗ್ಗ, ತುಮಕೂರು ಸೇರಿದಂತೆ ಇತರೆ ಭಾಗಗಳಿಂದ ನಸುಕಿನಲ್ಲಿ ಬಂದಿಳಿದ ಪ್ರಯಾಣಿಕರು ವಿವಿಧ ಬಡಾವಣೆಗಳಿಗೆ ತೆರಳಲು ಈ ಮಾರ್ಗದ ಬಸ್‌ ಅನುಕೂಲವಾಗಿದೆ’ ಎಂದು ಚಾಲಕ ಬಸಣ್ಣ ಮಾಹಿತಿ ನೀಡಿದರು. “ಬಿಎಂಇಎಲ್‌ನಿಂದ ಮೆಜೆಸ್ಟಿಕ್‌ಗೆ ತೆರಳುವ ಬಸ್‌ನಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ.

ರಾತ್ರಿ ವೇಳೆಗಿಂತ ಬೆಳಗಿನಜಾವ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ನಾನಾ ಭಾಗಗಳಿಂದ ಮೆಜೆಸ್ಟಿಕ್‌ಗೆ ಬಂದಿಳಿದವರು ಬಿಎಂಇಎಲ್‌ ಮಾರ್ಗದ ಮೂಲಕ ಮನೆಗಳಿಗೆ ಅಥವಾ ಕೆಲಸದ ಜಾಗಗಳಿಗೆ ತೆರಳಲು ಬಸ್‌ ಏರುತ್ತಾರೆ. ಶೇ. 50ರಷ್ಟು ಆಸನಗಳು ಭರ್ತಿ ಆಗಿರುತ್ತವೆ’ ಎಂದು ಬಿಇಎಂಎಲ್‌-ಮೆಜೆಸ್ಟಿಕ್‌ ಮಾರ್ಗದ ಚಾಲಕ ಸೋಮಶೇಖರ್‌ ತಿಳಿಸಿದರು.

ಪ್ರತಿವಾರ ಪೀಕ್‌ ಅವರ್‌, ರಾತ್ರಿ ಪಾಳಿ ಸಮಯದಲ್ಲಿನ ಜನ ದಟ್ಟಣೆಯನ್ನು ಸಿಬ್ಬಂದಿ ವರ್ಗ ಮೌಲ್ಯಮಾಪನ ಮಾಡುತ್ತಿದೆ. ಕಳೆದ ಎರಡು ತಿಂಗಳ ಹಿಂದೆ 1.86 ಕೋಟಿ ರೂ. ಆದಾಯ ಬರುತ್ತಿತ್ತು. ಈ ತಿಂಗಳು 2.90 ಕೋಟಿ.ರೂ. ಆದಾಯ ಬಂದಿದೆ. ಇದರಲ್ಲಿ ಪೀಕ್‌ ಅವರ್‌, ರಾತ್ರಿ ಪಾಳಿ, ವೋಲ್ವೊ ಕೂಡ ಸೇರಿದೆ. ಕೊರೊನಾ ಪೂರ್ವ ಸ್ಥಿತಿಗೆ ಹೋಲಿಸಿದರೆ, ನಿಧಾನವಾಗಿ ಚೇತರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ●ಅನ್ಬುಕುಮಾರ್‌, ವ್ಯವಸ್ಥಾಕಪ ನಿರ್ದೇಶಕ, ಬಿಎಂಟಿಸಿ

ಇಲ್ಲಿ ನೀರಸ ಸ್ಪಂದನೆ “ಕೊರೊನಾದಿಂದಾಗಿ ರಾತ್ರಿ ಸಮಯದ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿಮುಖವಾಗಿದ್ದು, ಈಗಲೂ ಶಿವಾಜಿನಗರ ಬಸ್‌ ನಿಲ್ದಾಣದಿಂದ ಕಾಡುಗೋಡಿಗೆ ಹೋಗುವ ಬಸ್‌ನಲ್ಲಿ ಹಚ್ಚೆಂದರೆ 5 ರಿಂದ 10 ಜನ ಪ್ರಯಾಣಿಸುತ್ತಾರೆ. ಕೊರೊನಾ ಪೂರ್ವ ಸ್ಥಿತಿಗೆ ಹೋಲಿಸಿದರೆ, ಇನ್ನೂ ಸ್ವಲ್ಪ ಪಿಕ್‌ ಅಪ್‌ ಆಗಬೇಕು.

ಕೆಲವು ಕಂಪೆನಿಗಳಲ್ಲಿ ಈಗಲೂ ವರ್ಕ್‌ ಫ್ರಂ ಹೋಂ ಇದೆ. ಹಲವೆಡೆ ಈ ಹಿಂದೆ ಬಸ್‌ಗಳಲ್ಲಿ ಬರುತ್ತಿದ್ದವರು, ಸುರಕ್ಷತೆ ದೃಷ್ಟಿಯಿಂದ ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ನೀರಸ ಸ್ಪಂದನೆಗೆ ಇದು ಕೂಡ ಕಾರಣ ಇರಬಹುದು’ ಎಂದು ಶಿವಾಜಿನಗರ-ಕಾಡುಗೋಡಿ ಮಾರ್ಗದ ನಿರ್ವಾಹಕ ಶ್ರೀನಾಥ್‌ ಅಭಿಪ್ರಾಯಪಟ್ಟರು.

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next