Advertisement

ನೀರಾವರಿ ಖಾತೆ ಸಿಕ್ಕರೆ ಅದೃಷ್ಟ: ರಮೇಶ

11:28 PM Dec 10, 2019 | Lakshmi GovindaRaj |

ಬೆಳಗಾವಿ: ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ಆದರೆ ನನಗೆ ನೀರಾವರಿ ಖಾತೆ ಸಿಕ್ಕರೆ ಅದೃಷ್ಟ. ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜಲಸಂಪನ್ಮೂಲ ಖಾತೆ ಸಿಕ್ಕರೆ ನನ್ನ ಅದೃಷ್ಟ.

Advertisement

ಈ ಇಲಾಖೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಕೇವಲ ಗೋಕಾಕ ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಅನುಕೂಲವಾಗುವ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ ಎಂದರು. ಎಂ.ಟಿ.ಬಿ ನಾಗರಾಜ್‌ ಹಾಗೂ ವಿಶ್ವನಾಥ್‌ ತ್ಯಾಗ ಮಾಡಿದ್ದಾರೆ. ಅವರು ಸೋತ ಕಾರಣಕ್ಕೆ ಅವರನ್ನು ಕೈಬಿಡಲು ಸಾಧ್ಯವಿಲ್ಲ. ಅವರಿಗೆ ಅನ್ಯಾಯವಾಗಿದೆ. ಕೆಲ ವಿಚಾರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ.

ಆದರೆ ಹೈಕಮಾಂಡ್‌ಗೆ ಮನವರಿಕೆ ಮಾಡಿ ಅವರಿಗೂ ಸಹ ಸೂಕ್ತ ಸ್ಥಾನ ನೀಡುವಂತೆ ವಿನಂತಿಸಲಾಗುವುದು ಎಂದರು. ಗೋಕಾಕನಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡಿರುವ ಶಾಸಕ ಸತೀಶ ಜಾರಕಿಹೊಳಿ ಅವರ ಮಾತಿನಲ್ಲಿ ಸತ್ಯವಿಲ್ಲ. ನಾನು ಹಾಗೂ ನನ್ನ ಅಳಿಯ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಅವರ ಆರೋಪಕ್ಕೆ ಪ್ರತಿಯಾಗಿ ನಾನೇ ಸ್ವತಃ ತನಿಖೆಗೆ ಆದೇಶ ಮಾಡುತ್ತೇನೆ.

ಈಗ ಕಾಂಗ್ರೆಸ್‌ ವಶದಲ್ಲಿರುವ ಬೆಳಗಾವಿ ಜಿಪಂನಲ್ಲಿ ಶೀಘ್ರದಲ್ಲೇ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದರು. ಈಗ ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕಳೆದ 13 ತಿಂಗಳಿನಿಂದ ಎಲ್ಲ ಶಾಸಕರು ಕೂಡಿ ಇದ್ದವರು. ಈಗ ಮತ್ತೆ ನಾವು ಎಲ್ಲ ಶಾಸಕರು ಸೇರಿ ಊಟ ಮಾಡಲು ಬೆಂಗಳೂರಿನಲ್ಲಿ ಸೇರುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next