ಕಾಸರಗೋಡು: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು. ಚರ್ಚ್ ಹಾಗೂ ಚರ್ಚ್ ಆವರಣದಲ್ಲಿ ಯೇಸುಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ (ವೇ ಆಫ್ ಕ್ರಾಸ್) ಆಚರಣೆ ಮಾಡಲಾಯಿತು. ಈ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ – ಸಂಕಷ್ಟಗಳ ಸ್ಮರಣೆ ಮಾಡಿದರು. ಇದೇ ಸಂದರ್ಭ ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶುಭ ಶುಕ್ರವಾರದಂದು ಚರ್ಚ್‌ಗಳಲ್ಲಿ ಘಂಟೆಗಳ ಶಬ್ದವಿರುವುದಿಲ್ಲ. ಬಲಿ ಪೂಜೆಯೂ ಇರಲಿಲ್ಲ. ಅತ್ಯಂತ ಭಕ್ತಿಯಿಂದ ನಿಶ್ಯಬ್ದ ಪರಿಸರದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಧ್ಯಾನ ಹಾಗೂ ಉಪವಾಸದಲ್ಲಿ ದಿನ ಕಳೆದರು. ಬೇಳ ಶೋಕಮಾತಾ ದೇವಾಲಯದಲ್ಲಿ ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ| ವಲೇರಿಯನ್ ಫ್ರ್ಯಾಂಕ್ ನೇತೃತ್ವ ನೀಡಿದರು.
ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಧರ್ಮಗುರು ಫಾ| ವಿಕ್ಟರ್ ಡಿ’ಸೋಜಾ, ನಾರಂಪಾಡಿ ಜೋನ್ ದಿ ಬ್ರಿಟ್ಟೋ ದೇವಾಲಯದಲ್ಲಿ ಧರ್ಮಗುರು ಫಾ| ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ, ಕಾಸರಗೋಡು ಶೋಕಮಾತಾ ದೇವಾಲಯದಲ್ಲಿ ಧರ್ಮಗುರು ಫಾ| ಸಂತೋಷ್ ಲೋಬೋ, ಕುಂಬಳೆ ಸಂತ ಮೋನಿಕಾ ದೇವಾಲಯದಲ್ಲಿ ಧರ್ಮಗುರು ಫಾ| ಮಾರ್ಸೆಲ್ ಸಲ್ಡಾನ, ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಧರ್ಮಗುರು ಫಾ| ಮೆಲ್ವಿನ್ ಫೆನಾಂìಡಿಸ್, ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ ಧರ್ಮಗುರು ಫಾ| ಫ್ರಾನ್ಸಿಸ್ ರೋಡ್ರಿಗಸ್, ಕೊಲ್ಲಂಗಾನ ಸೈಂಟ್ ಥೋಮಸ್ ದಿ ಅಪೋಸ್ತಲ್ ಚರ್ಚ್ ನಲ್ಲಿ ಧರ್ಮಗುರು ಫಾ| ಡೇನಿಯಲ್ ಡಿ’ಸೋಜಾ, ಮಣಿಯಂಪಾರೆ ಸಂತ ಲಾರೆನ್ಸ್ ಇಗರ್ಜಿಯಲ್ಲಿ ವಂ| ಫಾ| ಪೌಲ್ ಡಿ’ಸೋಜಾ, ಮರಿಯಾಶ್ರಮ ಅಸುಂಪ್ಶನ್ ಆಫ್ ಅವರ್ ಲೇಡಿ ಇಗರ್ಜಿ ಯಲ್ಲಿ ಫಾ| ಎಡ್ವಿನ್ ಮಾಸ್ಕರೇನಸ್, ಪಾವೂರು ಹಾಲಿ ಕ್ರಾಸ್ ಇಗರ್ಜಿಯಲ್ಲಿ ಧರ್ಮಗುರು ಜೋಸೆಫ್ ಕಾರಪಳ್ಳಿಲ್, ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ಇಗರ್ಜಿಯಲ್ಲಿ ಧರ್ಮಗುರು ಫಾ| ವಲೇರಿಯನ್ ಲೂವಿಸ್, ಮೀಯಪದವು ಅವರ್ ಲೇಡಿ ಆಫ್ ಫಾತಿಮಾ ಚರ್ಚ್‌ನಲ್ಲಿ ಧರ್ಮಗುರು ಫಾ| ಅನಿಲ್ ಜೋಯಲ್ ಡಿ’ಸೋಜಾ, ಉಕ್ಕಿನಡ್ಕ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಇಗರ್ಜಿಯಲ್ಲಿ ಧರ್ಮಗುರು ಫಾ| ಸ್ಟ್ಯಾನಿಲಸ್ ಡಿ’ಸೋಜಾ ನೇತೃತ್ವ ನೀಡಿದರು. 40 ದಿನಗಳ ವ್ರತಾಚರಣೆಯ ಅವಧಿಯ ಕೊನೆಯ 7 ದಿನಗಳನ್ನು ಪವಿತ್ರ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ.
ಗರಿಗಳ ರವಿವಾರದೊಂದಿಗೆ ಪ್ರಾರಂಭಗೊಳ್ಳುವ ಈ ಸಪ್ತಾಹ ಈಸ್ಟರ್ ರವಿವಾರದಂದು ಮುಕ್ತಾಯಗೊಳ್ಳುತ್ತದೆ. ಈ ಸಪ್ತಾಹದ ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನವನ್ನು ಆಚರಿಸಲಾಗುತ್ತದೆ. ಅಂದು ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳಿಂದ 12 ಮಂದಿ ಕ್ರೈಸ್ತರ ಪಾದ ತೊಳೆಯುವ ಕಾರ್ಯಕ್ರಮದ ಜತೆಗೆ ಪರಮ ಪ್ರಸಾದದ ಸಂಸ್ಕಾರ ಮತ್ತು ಧರ್ಮಗುರುಗಳ ದೀಕ್ಷಾಸಂಸ್ಕಾರದ ಪ್ರತಿಷ್ಠಾಪನಾ ದಿನಾಚರಣೆ ನಡೆಯುತ್ತದೆ.
ಶುಕ್ರವಾರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣೆ. ಜನರ ಪಾಪಗಳಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಯೇಸುಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ. ಯೇಸುಕ್ರಿಸ್ತರ ಪುನರುತ್ಥಾನ ದಿನವಾದ ಎಪ್ರಿಲ್ ಒಂದರಂದು ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಮಾ.31ರಂದು ರಾತ್ರಿ ಚರ್ಚ್‌ಗಳಲ್ಲಿ ವಿಧಿವಿಧಾನ ದಿವ್ಯ ಬಲಿಪೂಜೆ ನಡೆಯಲಿದೆ.