ದಾವಣಗೆರೆ: ಮೀಸಲಾತಿ ನೀಡುವ ಹಿನ್ನೆಲೆಯಲ್ಲಿ ಸಮೀಕ್ಷೆ ಕೈಗೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಬಳಿಕ ಪಂಚಮಸಾಲಿಗಳ ಹೋರಾಟಕ್ಕೆ ಒಳ್ಳೆಯ ದಿನ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿಗಳ ಕೊಡುಗೆ ಸ್ಮರಣೆ ಹಾಗೂ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಜವಾಬ್ದಾರಿ ನನ್ನ ಹೆಗಲ ಮೇಲೆ ಹೊತ್ತಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ
ಪಂಚಮಸಾಲಿ ಸಮುದಾಯದ ಬಗ್ಗೆ ಮೊದಲು ಗೆಜೆಟಿಯರ್‌ನಲ್ಲಿ ಮಾಹಿತಿಯೇ ಇರಲಿಲ್ಲ. ಅದನ್ನು ಗೆಜೆಟಿಯರ್‌ನಲ್ಲಿ ಸೇರಿಸಿ ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರ್ಪಡೆ ಮಾಡಲಾಯಿತು. ಇತ್ತೀಚೆಗೆ ಮಹಾರಾಷ್ಟ್ರದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮೀಸಲಾತಿ ನೀಡುವ ಸಮುದಾಯದ ನಿಖರ ಅಂಕಿ-ಅಂಶಗಳನ್ನು ಕೇಳಿದೆ. ಇದಕ್ಕೂ ಮುನ್ನವೇ ರಾಜ್ಯ ಸರಕಾರ ಮುಂದಾಲೋಚನೆ ಮಾಡಿ ಈ ಕುರಿತು ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದು, ಇನ್ನು ಕೆಲವೇ ಜಿಲ್ಲೆಗಳ ಸಮೀಕ್ಷೆ ಬಾಕಿ ಇದೆ. ಸಮೀಕ್ಷಾ ವರದಿ ಬಂದ ಬಳಿಕ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಕ್ರಮ ವಹಿಸಲಾಗುವುದು. ಇವೆಲ್ಲವೂ ನಮ್ಮ ಅವಧಿಯಲ್ಲೇ ಆಗಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.