ಗೋಣಿಕೊಪ್ಪ: ಕೊಡಗು ಜಿಲ್ಲೆಯ ಬಹುಭಾಗ ಮತ್ತು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಮಣ್ಣಿನ ಮೇಲ್ಪದರದ ಸವಕಳಿ ಉಂಟಾಗುತ್ತದೆ. ಮಣ್ಣಿನ ರಸಸಾರ ಸರಿಯಾದ ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಬೆಳೆಗಳಿಗೆ ರಸಗೊಬ್ಬರ ಹಾಗೂ ಪೋಷಕಾಂಶ ಪೂರೈಸುವ ಮೊದಲು ಮಣ್ಣಿನ ಪರೀಕ್ಷೆ ಮಾಡಿ ಅಗತ್ಯ ಪ್ರಮಾಣದಲ್ಲಿ ಮಣ್ಣಿಗೆ ಸುಣ್ಣ ಹಾಕಬೇಕೆಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಬಿ. ಪ್ರಭಾಕರ್ ಮಾಹಿತಿ ನೀಡಿದರು.
ಬಿರುನಾಣಿ ಟಿ. ಶೆಟ್ಟಿಗೇರಿಯ ಕೆ.ಕೆ. ಆರ್.,ನ ಪೊರಾಡ್ ರಿವರ್ ಸೈಡ್ ಅಸೋಸಿಯೇಷನ್ ಸಭಾಂಗಣದಲ್ಲಿ ಕೃಷಿ ಇಲಾಖೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಐ.ಸಿ.ಎ.ಆರ್., ಗೋಣಿಕೊಪ್ಪ ಕೃಷಿ ವಿಜ್ಞಾ ಕೇಂದ್ರ ಮತ್ತು ಪೊರಾಡು ಬಾಡಗರಕೇರಿ ಗ್ರಾಮದ ರಿವರ್‌ಸೈಡ್ ಅಸೋಸಿಯೇಷನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೆಳೆಗಾರರಿಗೆ ಕಾಳು ಮೆಣಸಿನ ಬೇಸಾಯದ ತರಬೇತಿ, ಅರ್ಕ ಸೂಕ್ಷ್ಮಾಣು ಜೀವಿಗಳ ಬಳಕೆ ಹಾಗೂ ಪ್ರಯೋಜನದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಕಾಳು ಮೆಣಸಿಗೆ ರಸಗೊಬ್ಬರ ಬಳಸಬಾರದು ಎಂಬ ಭಾವನೆ ಅನೇಕ ರೈತರಲ್ಲಿದ್ದು, ಇದು ತಪ್ಪು. ಕಾಳು ಮೆಣಸಿಗೆ ಅಗತ್ಯವಾದ ಹಾಗೂ ಸಮತೋಲನದ ರಸ ಗೊಬ್ಬರ ಹಾಗೂ ಲಘು ಪೋಷಕಾಂಶ ನೀಡಿದಾಗ ಮಾತ್ರ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ಆದಷ್ಟು ಹೆಚ್ಚಾಗಿ ಸಿಂಪಡನೆ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರ, ದ್ರವ ಸಾವಯವ ಗೊಬ್ಬರ ಹಾಗೂ ಲಘು ಪೋಷಕಾಂಶಗಳನ್ನು ನೀಡುವುದು ಸಹ ಹೆಚ್ಚು ಪ್ರಯೋಜನ ಹಾಗೂ ಖರ್ಚು ಕಡಿಮೆ ಯಾಗುತ್ತದೆ ಎಂದು ಹೇಳಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಂಶೋಧಿಸಿ ಉತ್ಪಾದಿಸುತ್ತಿರುವ ಆರ್ಕಾ ಸೂûಾ¾ಣು ಜೀವಿಗಳ ಸಮೂಹದ ಬಗ್ಗೆ ವಿಷಯ ತಜ್ಞರಾದ ಕೆ. ಪ್ರಭಾಕರ್ ಅವರು ಮಾಹಿತಿ ನೀಡಿ, ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಕಾರ್ಯಕ್ಷಮತೆಯನ್ನು ಈ ಉತ್ಪನ್ನ ಹೊಂದಿದ್ದು, ಕಾಳು ಮೆಣಸು ಬೆಳೆಗೆ ಹೆಚ್ಚು ಪ್ರಯೋಜನ ಕಾರಿಯಾಗಿದೆ ಎಂದು ಹೇಳಿದರು.
ಆರ್ಕಾ ಸೂಕ್ಷ್ಮಾಣು ಜೀವಿಗಳ ಬಳಕೆಯಿಂದ ಸಸ್ಯದ ಬೆಳವಣಿಗೆ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. ಜೈವಿಕ ಗೊಬ್ಬರವನ್ನು ಬೀಜೋಪ ಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರಕ್ಕೆ ಮತ್ತು ತೆಂಗಿನ ನಾರಿಗೆ ಸೇರಿಸಿ ಬೆಳೆಗಳಿಗೆ ಬಳಸ ಬಹುದು. ಶಿಫಾರಸು ಮಾಡಿದ ಸಾರಜನಕ ಮತ್ತು ರಂಜಕ ಯುಕ್ತ ಗೊಬ್ಬರದಲ್ಲಿ ಶೇಕಡ 25ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವಿವಿಧ ಬೆಳೆಗಳಿಗೂ ಇದನ್ನು ಬಳಸಬಹುದು. ಬೆಳೆಗಳಲ್ಲಿ ಶೇಕಡ 10ರಿಂದ 17ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದರು.