ದೇವನಹಳ್ಳಿ: ಹಿಂದಿನ ಕಾಲದಿಂದಲೂ ಸಂಗ್ರಹಿಸಿಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದೇ ದೊಡ್ಡ ವೈಭವ. ಶರನ್ನವರಾತ್ರಿಯಲ್ಲಿ ಗೊಂಬೆಗಳ ಪೂಜೆಗೆ ಆದ್ಯತೆಯಂತೆಯೇ ಜಿಲ್ಲಾದ್ಯಂತ ನಗರ, ತಾಲೂಕಿನ ವಿವಿಧ ಹಳ್ಳಿಯ ಮನೆಗಳಲ್ಲಿ ದಸರಾ ಗೊಂಬೆಗಳನ್ನು ಜೋಡಿಸಿರುವುದು ಗಮನ ಸೆಳೆಯಿತು.
ಕೊರೊನಾ ಇರುವುದರಿಂದ ಕೆಲವು ಮನೆಗಳಲ್ಲಿ ದೇವರ ಮನೆಗಳಲ್ಲಿಯೇ ಪಟ್ಟದ ಗೊಂಬೆಗಳನ್ನು ಕೂರಿಸಿ, ಪೂಜೆ ನೆರವೇರಿಸುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಪದ್ಧತಿ ಬಿಡದೇ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮನೆಯ ಮೂಲೆ ಮೂಲೆಗಳಲ್ಲಿ ಸೇರಿದ್ದ ನೂರಾರು ಗೊಂಬೆಗಳನ್ನು ಇದೀಗ ಮನೆಯ ಹಾಲ್‌ನಲ್ಲಿ ಜಾಗ ಮಾಡಿಕೊಂಡು ಮೂರರಿಂದ ಹನ್ನೊಂದು ಸ್ಟೆಪ್‌ವರೆಗೂ ವಿವಿಧ ಆಕೃತಿಯ ಗೊಂಬೆಗಳನ್ನು ಕೂರಿಸಲಾಗಿದೆ.
ಇದನ್ನೂ ಓದಿ;- ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ.. : ಸರಕಾರದ ವಿರುದ್ಧ ಎಚ್ ಡಿಕೆ ಧಿಕ್ಕಾರ
ರಾಜ ಪ್ರದರ್ಶನ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಗೊಂಬೆಗೆ ರಾಜ-ರಾಣಿಯಂತೆ ಅಲಂಕಾರ ಮಾಡಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ. ಪ್ರತಿವರ್ಷ ನವರಾತ್ರಿ ಪಾಡ್ಯ ದಿನದಿಂದಲೇ ಗೊಂಬೆಗಳನ್ನು ಜೋಡಿಸಿ ಪೂಜಿಸುತ್ತಾ ಬರುತ್ತಾರೆ. ನವರಾತ್ರಿ ಮುಗಿಯುವವರೆಗೂ ಪ್ರತಿದಿನ ಸಂಜೆ ಪೂಜೆ ಮಾಡುತ್ತಾರೆ. ಬರುವ ಮಕ್ಕಳಿಗೆ ಚಿಕ್ಕ ದೋಸೆ, ಚಾಕ್‌ಲೇಟ್, ಬರ್ಫಿ , ಇನ್ನಿತರೆ ವಸ್ತುಗಳನ್ನು ಮಕ್ಕಳಿಗೆ ಪ್ರಸಾದವಾಗಿ ನೀಡುತ್ತಾರೆ. ಪೂರ್ವಜರಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಾಮಾನ ಬಿಂಬಿಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಮುಂದಿನ ಪೀಳಿಗೆಗೆ ತಿಳಿಸಿ: ನಗರದ ಗಿಡ್ಡಿಬಾಗಿಲಿನಲ್ಲಿರುವ ಜಯಲಕ್ಷ್ಮೀ, ಪ್ರಶಾಂತ ನಗರದಲ್ಲಿ ಲೀಲಾವತಿ ಸೇರಿದಂತೆ ವಿವಿಧ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ. ಹಿರಿಯರು ಹೇಳಿದಂತೆ ಆಧುನಿಕತೆಯ ಸಂಸ್ಕೃತಿ ಬೆಳೆಯುತ್ತಿದ್ದಂತೆ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ ಆಚಾರ-ವಿಚಾರ ಮತ್ತು ಸಂಪ್ರದಾಯ ಪರಿಚಯಿಸಬೇಕಾಗಿದೆ. ಇಂದಿನ ಈ ಸಂದರ್ಭದಲ್ಲಿ ಪ್ರತಿಮನೆಗಳಲ್ಲಿ ಈ ರೀತಿ ಅಲಂಕಾರಿಕ ಗೊಂಬೆಗಳ ಆಚರಣೆ ನಡೆಸುವುದರಿಂದ ಸನಾತನ ಸಂಪ್ರದಾಯ ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕೆಂಬುವುದು ಹಿರಿಯರ ಆಶಯವಾಗಿದೆ.
ಗೊಂಬೆ ಕೂರಿಸಿ ಪೂಜೆ: ದಸರಾ ಹಬ್ಬದ ವೇಳೆ ಗೊಂಬೆ ಕೂರಿಸಿ ಪೂಜೆ-ಪುರಸ್ಕಾರ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಗೊಂಬೆ ಕೂರಿಸುವುದು ಕಡಿಮೆಯಾಗುತ್ತಿದೆ. ನಮ್ಮ ಸನಾತನ ಸಂಸ್ಕೃತಿ ಇಂತಹ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದು ಅನಿವಾರ್ಯವಾಗಿದೆ. ಆಚಾರ-ವಿಚಾರವನ್ನು ಪ್ರತಿಯೊಬ್ಬರೂ ಉಳಿಸಿ-ಬೆಳೆಸಬೇಕು ಎಂಬುವುದು ನಾಗರಿಕರ ಅಭಿಪ್ರಾಯವಾಗಿದೆ.