Advertisement

Udupi: ಗೊಂಬೆ ಹೇಳುತೈತೆ.. ಕಥೆಯ ಹೇಳುತೈತೆ; ಉದ್ಯಾವರದ ಗೊಂಬೆ ಸಂಭ್ರಮಕ್ಕೆ 33 ವರ್ಷ!

05:11 PM Oct 10, 2024 | Team Udayavani |

ಉಡುಪಿ: ನವರಾತ್ರಿಯ ಪುಣ್ಯ ಪರ್ವಕಾಲದಲ್ಲಿ ಪುರಾಣ ಕಥೆಗಳನ್ನು ಕಣ್ಣೆದುರು ದೃಶ್ಯಗಳಲ್ಲಿ ಬಿಂಬಿಸುವ ಚಿತ್ತಾಕರ್ಷಕ ಗೊಂಬೆಗಳನ್ನು ಕೂರಿಸಿ ಆರಾಧಿಸುವ ಪದ್ಧತಿ ಉದ್ಯಾವರ, ಉಡುಪಿ ಸೇರಿದಂತೆ ಹಲವು ಭಾಗಗಳಲ್ಲಿ ಇದೆ. ಕಳೆದ 33 ವರ್ಷಗಳಿಂದ ಗೊಂಬೆ ಪೂಜೆ ನಡೆಯುತ್ತಿರುವ ಉದ್ಯಾವರದ ಸಂಪಿಗೆ ನಗರ ಯು. ವಾಸುದೇವ ಭಟ್‌- ಸೀತಾ ಭಟ್‌ ದಂಪತಿಯ ಮನೆ ಗೊಂಬೆ ಮನೆಯೆಂದೇ ಪ್ರಸಿದ್ಧ. ಇಲ್ಲಿ ಗೊಂಬೆ ಆರಾಧನೆಗೆ ನಾಲ್ಕನೇ ಪೀಳಿಗೆ ಈಗ ಪ್ರವೇಶ ಮಾಡಿದೆ!

Advertisement

ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್‌ ಆಗಿರುವ ವಾಸುದೇವ ಭಟ್‌ ಅವರ ತಂದೆ-ತಾಯಿ ಹೈದರಾಬಾದ್‌ನಲ್ಲಿ 1973ರಲ್ಲಿ ಆರಂಭಿಸಿದ್ದ ಗೊಂಬೆ ಆರಾಧನಾ ಪದ್ಧತಿ ಈಗಲೂ ಮುಂದುವರಿದಿದೆ. ಉದ್ಯಾವರದಲ್ಲೇ ರಜತ ಮಹೋತ್ಸವ, ಸ್ವರ್ಣ ಮಹೋತ್ಸವದ ಆಚರಣೆಯೂ ನಡೆದಿದೆ. ವಾಸುದೇವ ಭಟ್‌ ಅವರ ಮಕ್ಕಳಾದ ಮುರಳೀಕೃಷ್ಣ ಭಟ್‌, ಮುರಹರಿ ಕೃಷ್ಣ ಕುಟುಂಬ, ಮೊಮ್ಮಕ್ಕಳು ಎಲ್ಲರೂ ಇದರಲ್ಲಿ ಕೈಜೋಡಿಸುತ್ತಾರೆ.

ವರ್ಗಾವಣೆಯ ಹಿನ್ನೆಲೆಯಲ್ಲಿ ಈ ಕುಟುಂಬ ಹೈದರಾಬಾದ್‌ನಲ್ಲಿ ಆರು ವರ್ಷ, ಅಧೋನಿಯಲ್ಲಿ ನಾಲ್ಕು ವರ್ಷ, ಪುತ್ತೂರಿನಲ್ಲಿ ಐದು ವರ್ಷ, ಉಡುಪಿಯಲ್ಲಿ ನಾಲ್ಕು ವರ್ಷ ಗೊಂಬೆ ಆರಾಧನೆ ನಡೆಸಿ ಈಗ ಉದ್ಯಾವರದಲ್ಲಿ 33 ವರ್ಷಗಳಿಂದ ಆಚರಿಸುತ್ತಿದೆ. ಈ ಮನೆಯಲ್ಲಿ 1000ಕ್ಕೂ ಅಧಿಕ ಗೊಂಬೆಗಳಿವೆ.

ಪೌರಾಣಿಕ, ಆಧುನಿಕ ಕಥಾನಕಗಳು
ಇಲ್ಲಿನ ಗೊಂಬೆಗಳು ಶ್ರೀ ಕೃಷ್ಣನ ಬಾಲ ಲೀಲೆ, ಶ್ರೀ ರಾಮ ಪಟ್ಟಾಭಿಷೇಕ, ವಿಶ್ವರೂಪ ದರ್ಶನ, ದ್ರೌಪದಿ ವಸ್ತ್ರಾಪಹರಣ, ಉರಿಯುವ ಅರಗಿನ ಅರಮನೆಯಿಂದ ಒಡಹುಟ್ಟಿದವರನ್ನು ಎತ್ತಿ ಕರೆದೊಯ್ಯುವ ಭೀಮಸೇನ, ಶರಶಯ್ಯೆಯಲ್ಲಿನ ಭೀಷ್ಮ, ಕಂಸವಧೆ, ಗಜೇಂದ್ರ ಮೋಕ್ಷ, ಬಕಾಸುರನ ಊಟ, ಕಂದ ಕೃಷ್ಣನನ್ನು ಬುಟ್ಟಿಯಲ್ಲಿರಿಸಿ ಯಮುನಾ ನದಿ ದಾಟಿಸುವ ತಂದೆ ವಸುದೇವ, ಪೂತನಿ ಸಂಹಾರ, ಕಾಲಿಯಾ ಸಂಹಾರ, ಸಮುದ್ರ ಮಥನ, ರಾವಣ ದರ್ಬಾರ್‌, ದಶಾವತಾರ, ಅಷ್ಟ ಲಕ್ಷ್ಮೀಯರು, ಶಬರಿಮಲೈ, ಪಳನಿ, ತಿರುಪತಿ ವೆಂಕರಮಣ, ಪುರಿ ಜಗನ್ನಾಥ, ಪಂಡರಾಪುರ ಪ್ರಮುಖ ಆಕರ್ಷಣೆಗಳಾಗಿವೆ.

Advertisement

ಇದರೊಂದಿಗೆ ಟ್ವಿನ್‌ ಟವರ್‌, ವಿದೇಶಿ ನೃತ್ಯಧಾರಿಗಳು ಸಹಿತ ಕೌಲಾಲಂಪುರ, ದುಬೈ, ಮಲೇಷ್ಯಾ, ರಷ್ಯಾ ಸಹಿತ ವಿದೇಶದಲ್ಲಿಯೂ ಖರೀದಿಸಿ ಗೊಂಬೆಗಳು ಆಕರ್ಷಿಸುತ್ತಿದೆ.

ಇಲ್ಲಿದೆ ಅಯೋಧ್ಯಾ ಮಂದಿರ!
ನಗರದ ವಿದ್ಯೋದಯ ಶಾಲೆ ಬಳಿಯ ಅಪಾರ್ಟ್‌ಮೆಂಟ್‌ ನಿವಾಸಿ ಶುಭಾ ರವೀಂದ್ರ ಅವರು ಮನೆಯೊಳಗೆ ಅಯೋಧ್ಯಾ ಮಂದಿರವನ್ನೇ ನಿರ್ಮಿಸಿದ್ದಾರೆ. ಮೂಲತಃ ಬೆಂಗಳೂರಿನ ಇವರು 8 ವರ್ಷದಿಂದ ಉಡುಪಿ ನಿವಾಸಿ. ಮೈಸೂರು ಅರಮನೆ, ಜಂಬೂ ಸವಾರಿ, ಘಟೋದ^ಜ, ಶ್ರೀನಿವಾಸ ಕಲ್ಯಾಣ, ದಶವತಾರ, ಮಣ್ಣು ಹಾಗೂ ಮರದಿಂದ ತಯಾರಿಸಲ್ಪಟ್ಟ ಸುಮಾರು 500 ಗೊಂಬೆಗಳು ಇಲ್ಲಿವೆ. ಅವರು ಪ್ರತಿ ವರ್ಷ ಒಂದು ಸೆಟ್‌ ಹೆಚ್ಚುವರಿ ಗೊಂಬೆ ತರುತ್ತಾರಂತೆ.

ಮನೆಯೊಳಗೇ ಮೈಸೂರು ಅರಮನೆ
ಉಡುಪಿ: ಮೈಸೂರು ಅರಮನೆ, ದಸರಾ ಮೆರವಣಿಗೆ, ಪಟ್ಟದ ಆನೆ, ಕಾಲಾಳುಗಳು, ಸಂಗೀತಗಾರರು, ವಾದ್ಯದವರು, ಆಕರ್ಷಕ ಕಮಾನು ಗಳು ಹೀಗೆ ಇಲ್ಲಿ ಏನುಂಟು ಏನಿಲ್ಲ ಹೇಳಿ. ದಸರಾಕ್ಕಾಗಿ ಇಡೀ ಮೈಸೂರು ಅರಮನೆಯನ್ನೇ ಮನೆಯೊಳಗೆ ಸೃಷ್ಟಿಸಿ ಕೊಂಡವರು ಕಿನ್ನಿಮೂಲ್ಕಿ ಬಾನಬೆಟ್ಟು ನಿವಾಸಿ ಎಂ.ಎನ್‌.ರಾಜೇಂದ್ರ ಅವರು. ಮೂಲತಃ ಮೈಸೂರಿನವರಾದ ಇವರು 2013ರಿಂದಲೂ ಉಡುಪಿಯಲ್ಲಿ ಈ ಸಂಪ್ರದಾಯ ಮುಂದುವರಿಸುತ್ತಿದ್ದಾರೆ. ಇರುವ ಗೊಂಬೆಗಳಲ್ಲಿ ಕೆಲವನ್ನು ಮಾತ್ರ ಬಳಸಿ ವರ್ಷಕ್ಕೊಂದು ಥೀಮ್‌ ಪ್ರದರ್ಶನ ಮಾಡುತ್ತಾರೆ.

 -ಪುನೀತ್‌ ಸಾಲ್ಯಾನ್‌/ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next